ಹೊನ್ನಾವರ : ತಾಲೂಕಿನ ಖರ್ವಾ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ನಾರಾಯಣ ಗೌಡ ಮೇಲೆ ಹಲ್ಲೆ ನಡೆಸಿದ ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ತಾಲೂಕಾ ಒಕ್ಕೂಟದ ನೌಕರರು ತಹಸೀಲ್ದಾರರಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.
ಖರ್ವಾ ಗ್ರಾ.ಪಂ.ದಲ್ಲಿ ಕಳೆದ ೨೭ ವರ್ಷಗಳಿಂದ ನಾರಾಯಣ ಗೌಡ ಬಿಲ್ ಕಲೆಕ್ಟರ್ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಫೆ.೭ರಂದು ಕಚೇರಿ ಕೆಲಸ ನಿರ್ವಹಿಸುತ್ತಿರುವ ಸಮಯದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ತನುಜಕುಮಾರ ಗಣಪತಿ ನಾಯ್ಕ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ದೈಹಿಕವಾಗಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ನಾರಾಯಣ ಗೌಡ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾ.ಪಂ. ಸಿಬ್ಬಂದಿಗಳು ಕನಿಷ್ಠ ವೇತನದಲ್ಲಿ ಗರಿಷ್ಠ ಸೇವೆಯಲ್ಲಿ ಕೆಲಸ ನಿರ್ವಹಿಸುತ್ತೇವೆ. ಸರಕಾರದ ಪಿಂಚಣಿ, ವಿಮಾ ಸೌಲಭ್ಯವಿಲ್ಲದೇ ಗ್ರಾಮ ಮಟ್ಟದಲ್ಲಿ ಒಬ್ಬರೇ ಕೆಲಸ ನಿರ್ವಹಿಸುಬೇಕಾಗಿದೆ. ನಿರ್ಜನ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹಣೆಗಾಗಿ ಒಬ್ಬರೇ ಸಂಚರಿಸಬೇಕಾಗುವುದು. ಒಬ್ಬರೇ ಸಂಚರಿಸುವ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸಬೇಕಾದ ಅನಿರ್ವಾಯತೆ ಇದೆ. ಹೀಗಿರುವಾಗ ಕಛೇರಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ದೈಹಿಕವಾಗಿ ಹಲ್ಲೆ ಮಾಡಿದ್ದು ಖಂಡಿಸುವುದಾಗಿ ಮನವಿಯಲ್ಲಿ ಹೇಳಿದ್ದಾರೆ.
ಆರೋಪಿಯನ್ನು ಬಂಧಿಸಿ, ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಾಲೂಕಿನ ಎಲ್ಲ ಗ್ರಾ. ಪಂ. ನೌಕರರು ಕಛೇರಿ ಕೆಲಸ ನಿಲ್ಲಿಸಿ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿದ್ದಾರೆ.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ತಾಲೂಕಾ ನಿರ್ದೇಶಕರಿಗೆ ನವಿಯನ್ನು ಕಳುಹಿಸಿದ್ದಾರೆ.