ಶಿರಸಿ, ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಜನನಿ ಮ್ಯೂಸಿಕ್ ಸಂಸ್ಥೆ ಶಿರಸಿ ಸಂಘಟಿಸಿದ್ದ ವಿಶೇಷ ಸಂಗೀತ ಕಾರ್ಯಕ್ರಮ ಉ.ದ.ಪಾ.ವು ಸೇರಿದ್ದ ಸಂಗೀತಾಭಿಮಾನಿಗಳ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ ಸಂಕದಗುಂಡಿ ಮಾತನಾಡಿ ಆಯಾಕ್ಷೇತ್ರದಲ್ಲಿ ಸಾಧನೆ ಮಾಡಲು ಶಾಸ್ತ್ರೀಯ ಸಂಗೀತ ಆಲಿಸುವುದು, ಅಭ್ಯಾಸ ಮಾಡುವುದು ಎಲ್ಲವೂ ಹೆಚ್ಚಿನ ಮಹತ್ವ ಪೂರ್ಣವಾಗಿದ್ದು ವೈಜ್ಞಾನಿಕವಾಗಿ ಹಾಗೂ ಮಾನಸಿಕವಾಗಿ ಕೂಡ ಇದು ಶ್ರೇಷ್ಠತೆ ಹೊಂದಿದೆ. ಶಾಸ್ತ್ರ ಬದ್ಧವಾದ ಹಾಡಿಗೆ ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ತೊಡಗಿಕೊಳ್ಳುವಂತೆ ಮಾಡಿದರೆ ಮುಂದೊಂದು ದಿನ ಅವರು ಜೀವನದ ಯಶಸ್ಸು ಹೊಂದುತ್ತಾರೆ ಎಂದರು. ವೇದಿಕೆಯಲ್ಲಿ ಪ್ರಧಾನ ವ್ಯವಸ್ಥಾಪಕ ರಾಮಕೃಷ್ಣ ಹೆಗಡೆ ಉಪಸ್ಥಿತರಿದ್ದರು.
ನಂತರದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಆಮತ್ರಿಂತ ಕಲಾವಿದ ಗಾಯಕ ಹಾಗೂ ಬಿ.ಇ. ಇಂಜೀನಿಯರ್ ಕೂಡಾ ಆದ ವಿಶಾಲ ಹೆಗಡೆ ಧಾರವಾಡ ತಮ್ಮ ಗಾಯನ ನಡೆಸಿಕೊಡುತ್ತ ರಾಗ ಮಾರು ಬಿಹಾಗ್ದೊಂದಿಗೆ ವಿಲಂಬಿತ ಎಕತಾಳ ರಸಿಯಾ ಆವೋನಾ ಬಂದೀಶ್, ದೃತ್ ತೀನ್ತಾಳ್ಗಳನ್ನು ಪ್ರಸ್ತುತಗೊಳಿಸಿದರು. ತದನಂತರದಲ್ಲಿ ಜನಪ್ರಿಯವಾದ ಹಾಡು ಶ್ರೀರಾಮಾ ನಿನ್ನ ಪಾದವತೋರೊ ಹಾಡಿ ಪ್ರೇಕ್ಷಕರ ಕರತಾಡನಕ್ಕೆ ಭಾಜನರಾದರು.
ನಂತರ ತಮ್ಮ ಸಂಗೀತ ಕಛೇರಿಯನ್ನು ನಡೆಸಿಕೊಟ್ಟ ಶಿರಸಿ ಜನನಿ ಮ್ಯೂಸಿಕ್ ಸಂಸ್ಥೆಯ ವಿದುಷಿ ರೇಖಾ ದಿನೇಶ ರಾಗ್ ಮಿಯಾಮಲ್ಹಾರ್ನಲ್ಲಿ ಝೂಮ್ರಾ ತಾಳದ ಭಾಜತ ಭೀತತ ಘನ ವಿಲಂಬಿತ್ ಬಂದಿಶ್ನೊಂದಿಗೆ ಪ್ರಾರಂಭಿಸಿ ಭೋಲೇರೆ ಪಪೀಹರಾ ಖಯಾಲ್ ಅನ್ನು ದೃತ್ನಲ್ಲಿ ಮತ್ತು ತರನಾವನ್ನು ಪ್ರಸ್ತುತಗೊಳಿಸಿದರು. ದಾಸರಪದ ಏಳಮ್ಮ ತುಳಸಿ ಹಾಡುತ್ತ ಕೊನೆಯಲ್ಲಿ ರಾಗ್ ಬೈರವಿಯಲ್ಲಿ ತಂಬೂರಿ ಮೀಟಿದವ ಹಾಡುತ್ತ ಒಟ್ಟಾರೆ ಕಾರ್ಯಕ್ರಮ ಸಮಾಪ್ತಿಗೊಳಿಸಿದರು.
ವಿಶಾಲ ಹೆಗಡೆ ಹಾಗೂ ರೇಖಾ ದಿನೇಶರವರ ಗಾನಕ್ಕೆ ಆಯಾ ಹಾಡಿಗೆ ತಕ್ಕಂತೆ ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ ಹಾಗೂ ತಬಲಾದಲ್ಲಿ ಗುರುರಾಜ ಆಡುಕಳ ಸಮರ್ಥವಾಗಿ ಸಾಥ್ ನೀಡಿದರು. ಹಿನ್ನೆಲೆಯ ತಾನ್ಪುರಾದಲ್ಲಿ ಪೃಥ್ವಿ ಹೆಗಡೆ, ಮಹಿಮಾ ಗಾಯತ್ರಿ, ವಿಜಯಶ್ರೀ ಹೆಗಡೆ ಸಹಕರಿಸಿದರು.
ಇದಕ್ಕೂ ಪೂರ್ವದಲ್ಲಿ ನಡೆದ ಸಮೂಹ ಗಾನ ಎರಡು ವಿಭಾಗವಾಗಿ ನಡೆದಿದ್ದು ಒಂದು ಗಾನದಲ್ಲಿ ರೇಖಾ ಸತೀಶ ಭಟ್ಟ ನಾಡಗುಳಿ ವಿಜಯಶ್ರೀ ಶಿರಸಿ, ರೇಷ್ಮಾ ಶೇಟ್, ಚೈತ್ರ ಹೆಗಡೆ, ಮಹಿಮಾ ಗಾಯತ್ರಿ ರಾಗ್ ಮೇಘ ಮತ್ತು ದೇಸ್ಸೂರ್ ಮಲ್ಹಾರ್ ರಾಗಗಳ ಮಿಶ್ರಣವಾಗಿ ಬಂದೀಶಗಳನ್ನು ವಿನೂತನವಾಗಿ ಹಾಡಿದರು. ಜೊತೆ ಜೊತೆಗೆ ಇನ್ನೊಂದು ಸಮೂಹ ಗಾನದಲ್ಲಿ ಪೃಥ್ವಿ ಬೊಮ್ನಳ್ಳಿ, ಮಹಿಮಾ ಗಾಯತ್ರಿ, ಆಶಾ ಕೆರೆಗದ್ದೆ, ಚೈತ್ರ ಹೆಗಡೆ ಪಾಲ್ಗೊಂಡು ರಾಗ್ ಭೀಮ ಪಲಾಸ್ ಖ್ಯಾಲ್ ಗಾಯನವನ್ನು ಪ್ರಸ್ತುತ ಪಡಿಸಿದರು.
ಎರಡು ಬಗೆಯಲ್ಲಿ ನಡೆದ ಸಮೂಹ ಗಾನಕ್ಕೆ ತಬಲಾದಲ್ಲಿ ಕಿರಣ ಹೆಗಡೆ ಕಾನಗೋಡ ಹಾಗೂ ಹಾರ್ಮೊನಿಯಂನಲ್ಲಿ ಮಾನಸಾ ಹೆಗಡೆ ಸಾಥ್ ನೀಡಿದರು. ಸಂಪೂರ್ಣ ಕಾರ್ಯಕ್ರಮವನ್ನು ಗಿರಿಧರ ಕಬ್ನಳ್ಳಿ ಸ್ವಾಗತಿಸಿ ನಿರೂಪಿಸಿದರೆ, ಜನನಿ ಸಂಸ್ಥೆಯ ಅಧ್ಯಕ್ಷ ದಿನೇಶ್ ಹೆಗಡೆ ವಂದಿಸಿದರು.