ದಾಂಡೇಲಿ : ನಗರದ ಕರ್ನಾಟಕ ಉತ್ತರ ಭಾರತೀಯ ಸಮಾಜದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಬಂಗೂರನಗರದ ಡಿಲೆಕ್ಸ್ ಆವರಣದಲ್ಲಿ ಸಂಭ್ರಮ, ಸಡಗರದಿಂದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರ್ನಾಟಕ ಉತ್ತರ ಭಾರತೀಯ ಸಮಾಜದ ಅಧ್ಯಕ್ಷರಾದ ರವೀಂದ್ರ ಶಾಹ ನಾವು ನಮ್ಮ ಸಮಾಜ ಬಾಂಧವರು ಪರಸ್ಪರ ಒಗ್ಗಟ್ಟು, ಸೌಹಾರ್ದತೆ, ಪ್ರೀತಿ ಭಾತೃತ್ವದಿಂದ ಕೂಡಿ ಬಾಳಬೇಕು ಎನ್ನುವ ಆಶಯವನ್ನು ಹೊತ್ತಿ ಸಮಾಜದ ಸಂಘವನ್ನು ರಚಿಸಿಕೊಂಡಿದ್ದೇವೆ. ಉತ್ತರ ಭಾರತಿಯ ಸಮಾಜವು ತಮ್ಮ ಸಂಸ್ಕೃತಿ ಹಾಗೂ ಆದರ್ಶ ಪರಂಪರೆಗೆ ಹೆಸರುವಾಸಿಯಾಗಿದ್ದು, ಈಗಾಗಲೇ ಛಟ್ ಪೂಜೆಯಂತಹ ಹಲವಾರು ಆಚರಣೆಗಳನ್ನು ಮಾಡುತ್ತಾ ಬಂದಿದ್ದೇವೆ. ಸಮಾಜದ ಒಳಿತಿಗಾಗಿ ಹಾಗೂ ನಮ್ಮ ಸಂಸ್ಕೃತಿಯ ರಕ್ಷಣೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಕರೆ ನೀಡಿದರು.
ಸಂಘದ ಸಂಯೋಜಕರಾದ ಅಶುತೋಷ ಕುಮಾರ್ ರಾಯ್, ನಮ್ಮ ನಮ್ಮೊಳಗೆ ಆತ್ಮೀಯ ಬಾಂಧವ್ಯವನ್ನು ಮತ್ತಷ್ಟು ಸದೃಢಗೊಳ್ಳುವಂತಾಗಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ನಾವು ಸಮಾಜ ಬಾಂಧವರು ಪರಸ್ಪರ ಸಾಮರಸ್ಯದಿಂದ ಹಾಗೂ ಸೌಹಾರ್ದತೆಯಿಂದ ಇದ್ದು, ಸಮಾಜವನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದರು.
ಸಮಾಜದ ಉಪಾಧ್ಯಕ್ಷರಾದ ವಿನೋದ್ ಕುಮಾರ್ ಯಾದವ್, ಪ್ರಧಾನ ಕಾರ್ಯದರ್ಶಿ ಜ್ಞಾನ ಯಾದವ್, ಖಜಾಂಚಿ ಉದಯ ಗುಪ್ತಾ, ಸಮಾಜದ ನಿಕಟ ಪೂರ್ವ ಅಧ್ಯಕ್ಷರಾದ ವೆಂಕಟೇಶ್ ಪಾಂಡೆ ಅವರು ಪ್ರೇಮದಿಂದ ಇರೋಣ, ಕೂಡಿ ಬಾಳೋಣ. ಕಷ್ಟ ಸುಖಗಳಲ್ಲಿ ಪರಸ್ಪರ ಭಾಗಿಯಾಗೋಣ. ಜನ್ಮ ಭೂಮಿಯ ಸಂಸ್ಕೃತಿ, ಸಂಸ್ಕಾರ ಮತ್ತು ಧಾರ್ಮಿಕ ಆಚರಣೆಗಳ ಸದಾ ಆರಾಧನೆಯೊಂದಿಗೆ ಕರ್ಮ ಭೂಮಿಯನ್ನು ಸದಾ ಗೌರವಿಸುವ ಮೂಲಕ ಕರ್ಮಭೂಮಿಯ ಏಳಿಗೆಗೂ ನಮ್ಮನ್ನು ನಾವು ತೊಡಗಿಸಿ ಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರುಗಳಾದ ಪ್ರವೀಣ್ ಮಿಶ್ರಾ, ಗಲಾಬ್ ಮೆಹತೋ, ದಿಗ್ವಿಜಯ್ ಸಿಂಗ್, ನಿರಂಜನ ಶಾಹ, ಸಂಜಯ ಗುಪ್ತಾ, ಚಂದನ ಗುಪ್ತಾ ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಶ್ರೀರಾಮ ಗುಪ್ತಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಬಾಂಧವರಿಗಾಗಿ ವಿವಿಧ ಚುಟುಕು ಸ್ಪರ್ಧಾ ಕಾರ್ಯಕ್ರಮಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸ್ಥಳದಲ್ಲೆ ಬಹುಮಾನವನ್ನು ವಿತರಿಸಲಾಯಿತು.
ಕರ್ನಾಟಕ ಉತ್ತರ ಭಾರತೀಯ ಸಮಾಜದ ಪ್ರಮುಖರಾದ ಯೋಗೇಶ್ ಸಿಂಗ್ ಸರ್ವರನ್ನು ಸ್ವಾಗತಿಸಿ, ವಂದಿಸಿದ ಕಾರ್ಯಕ್ರಮವನ್ನು ವೆಂಕಟೇಶ್ ಪಾಂಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಉತ್ತರ ಭಾರತೀಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.