ಯಲ್ಲಾಪುರ: ತಾಲೂಕಿನ ಭರತನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ತನ್ನ ಸಕ್ರಿಯ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಹಿಂದಿನಿಂದಲೂ ಸಾಕಷ್ಟು ಹೆಸರು ಮಾಡಿದ್ದು, ಇದೀಗ ಸರ್ವಾಂಗೀಣ ಅಭಿವೃದ್ಧಿಗೊಂಡು, ಮಾದರಿ ಶಾಲೆಯಾಗಿ ರೂಪುಗೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.
ಅವರು, ಜ.೧೬ ರಂದು ಕುಂದರಗಿ ಗ್ರಾ.ಪಂ. ವ್ಯಾಪ್ತಿಯ ಭರತನಹಳ್ಳಿಯ ಸ.ಹಿ.ಪ್ರಾ.ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ, ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕುಂದರಗಿ ಸೇ.ಸ.ಸಂಘದ ಅಧ್ಯಕ್ಷ ಹೇರಂಭ ಹೆಗಡೆ ಮಾತನಾಡಿ, ನಮ್ಮೂರಿನ ಶಾಲೆಯ ಅಭಿವೃದ್ಧಿ ಎಸ್‌ಡಿಎಂಸಿ, ಶಿಕ್ಷಕರು, ಪಾಲಕರು ಹಾಗೂ ಊರಿನವರ ಸಹಯೋಗದಿಂದ ಸಾಧ್ಯವಾಗಿದ್ದು, ಇದು ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು. ಶಾಲೆಯಲ್ಲಿ ಬೆಳಿಗ್ಗೆಯಿಂದ ಆರಂಭಗೊಂಡ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸಂತೋಷ್ ಜಗಳೂರು ಮಾತನಾಡಿ, ಶೈಕ್ಷಣಿಕ ಹಬ್ಬವೆಂದರೆ ಶಿಕ್ಷಣ ಮತ್ತು ದೈನಂದಿನ ಜೀವನವನ್ನು ಸೇರಿಸುವ ಕೊಂಡಿಯಾಗಿದೆ. ಮೆಟ್ರಿಕ್ ಮೇಳಗಳ ಮೂಲಕ ಮಕ್ಕಳು ದೈನಂದಿನ ಜೀವನದಲ್ಲಿ ಗಣಿತದ ಅನ್ವಯಗಳನ್ನು ಅನುಭವಗಳ ಮೂಲಕ ಪಡೆದುಕೊಳ್ಳಲು ನೆರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಿ.ಡಿ.ಓ. ರವಿ ಪಟಗಾರ, ಗ್ರಾ.ಪಂ. ಸದಸ್ಯರಾದ ಪ್ರಕಾಶ್ ನಾಯ್ಕ, ಜ್ಯೋತಿ ಹುದಾರ್, ಹಿರಿಯ ಶಿಕ್ಷಕರಾದ ಮೀನಾಕ್ಷಿ ಗೌಡ, ಮಂಚಿಕೇರಿ ಸಿಆರ್‌ಪಿ ಕೆ.ಆರ್.ನಾಯ್ಕ, ಉಮ್ಮಚಗಿ-ಕುಂದರಗಿ ಸಿಆರ್‌ಪಿ ವಿಷ್ಣು ಭಟ್ಟ ಉಪಸ್ಥಿತರಿದ್ದರು.
ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು ವೈವಿಧ್ಯಮಯ ಅಂಗಡಿಗಳನ್ನು ತೆರೆದು, ತಾವೇ ಸ್ವತಃ ಮಾಲಿಕರಾಗಿ ಅಂಗಡಿಗಳನ್ನು ನಡೆಸಿದರು. ಇದರೊಂದಿಗೆ ಗಣಿತದ ಮೂಲಕ್ರಿಯೆಯ ಜ್ಞಾನ ಪಡೆದರು.
ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಿನ ಇಸಿಒ ಪ್ರಶಾಂತ್ ಜಿ.ಎನ್, ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ, ಗ್ರಾ.ಪಂ. ಸದಸ್ಯ ಪ್ರಕಾಶ್ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಶಿಕಾಂತ ಹೆಗಡೆ, ಕುಂದರಗಿ ಸಿಆರ್‌ಪಿ ವಿಷ್ಣು ಭಟ್ಟ ಉಪಸ್ಥಿತರಿದ್ದರು.
ವರ್ಷವಿಡೀ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸತತ ೧೫ ವರ್ಷಗಳ ಕಾಲ ಉತ್ತಮ ವಿದ್ಯಾರ್ಥಿಗಳಿಗೆ ನೀಡುವ ಬಹುಮಾನದ ಪ್ರಾಯೋಜಕತ್ವ ನೀಡಿದ ಮಂಜುನಾಥ ರೇವಣಕರ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಾಧ್ಯಾಪಕಿ ನಾಗರತ್ನಾ ಉಪ್ಪಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಹಶಿಕ್ಷಕರಾದ ಎಂ.ಎಚ್ ಸಹನಾ ನಿರ್ವಹಿಸಿದರು. ಅಕ್ಷತಾ ಎಚ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.