Slide
Slide
Slide
previous arrow
next arrow

ಬಾಲ್ಯ ಜೀವನ ವ್ಯರ್ಥ ಮಾಡದೇ ಅಧ್ಯಯನಕ್ಕಾಗಿ ಮೀಸಲಿಟ್ಟು, ಗುರಿ ಸಾಧಿಸಿ: ಯಲ್ಲಪ್ಪ ಹೊಸ್ಮನಿ

300x250 AD

ಯಲ್ಲಾಪುರ : ವಿದ್ಯಾರ್ಥಿಗಳು ಬಾಲ್ಯದ ಜೀವನವನ್ನು ವ್ಯರ್ಥವಾಗಿ ಕಳೆಯದೇ, ಓದು ಮತ್ತು ಅಧ್ಯಯನಗಳಿಗೆ ಮೀಸಲಿಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಚೀಕೇರಿ ವಲಯದ ಮೇಲ್ವಿಚಾರಕ ಯಲ್ಲಪ್ಪ ಹೊಸ್ಮನಿ ಹೇಳಿದರು.

ಅವರು, ಜ.೧೭ ರಂದು ತಾಲೂಕಿನ ಕುಂದರಗಿ ಸ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗ್ರಾ.ಪಂ. ಕುಂದರಗಿ ಇವರ ಸಹಕಾರದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸ.ಹಿ.ಪ್ರಾ.ಶಾಲೆ ಕುಂದರಗಿ ಇವರು ಹಮ್ಮಿಕೊಂಡಿದ್ದ ೭೭ ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ “ಕುಂದಣ” ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ, ಮಾತನಾಡುತ್ತಿದ್ದರು. ಪಾಲಕರು ಆಸ್ತಿ ಗಳಿಕೆಯ ವಿಚಾರ ಮಾಡುವುದಕ್ಕಿಂತ ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿ ಮಾರ್ಪಾಡಿಸಿಕೊಳ್ಳಬೇಕು. ತಮ್ಮ ಮಕ್ಕಳು ಸ್ವಾರ್ಥರಹಿತರಾಗಿ ಪರಸುಖದ ಕುರಿತು ಚಿಂತಿಸುವಂತೆ ಪ್ರೇರಣೆ ನೀಡಬೇಕು. ಇಂದು ಬಿಡುಗಡೆಯಾದ ಕುಂದಣ ಪತ್ರಿಕೆಯು ಶಾಲೆ ನಡೆದುಬಂದ ದಾರಿಯನ್ನು ಸಮಗ್ರವಾಗಿ ಅವಲೋಕಿಸಿದ್ದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ. ಅಧ್ಯಕ್ಷ ಮುಕ್ತಾರ ಪಠಾಣ್ ಮಾತನಾಡಿ, ಅನೇಕರ ಸಹಕಾರದಿಂದ ಶಾಲೆಯ ಎಲ್ಲ ಕಾರ್ಯಕ್ರಮಗಳೂ ಮತ್ತು ಇಂದಿನ ವಾರ್ಷಿಕೋತ್ಸವವೂ ಯಶಸ್ವಿಯಾಗಿ ನಡೆಯುತ್ತಿದೆ. ಐತಿಹಾಸಿಕ ಶಾಲೆಯಲ್ಲಿ ವಿವಿಧ ಮೂಲಭೂತ ಸೌಕರ್ಯಗಳ ಅಗತ್ಯವಿದ್ದು, ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳು ಗಮನಹರಿಸಿ, ಅವುಗಳನ್ನು ಈಡೇರಿಸಿಕೊಡಬೇಕು ಎಂದು ಮನವಿ ಮಾಡಿದರು.

300x250 AD

ವಿದ್ಯಾರ್ಥಿಗಳ ಕೈಬರಹ ಪತ್ರಿಕೆಯನ್ನು ಬಿಡುಗಡೆ ಮಾಡಿದ ಸಿ.ಆರ್.ಪಿ. ವಿಷ್ಣು ಭಟ್ಟ ಮಾತನಾಡಿ, ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆಗಳ ಅನಾವರಣವೇ ವಾರ್ಷಿಕೋತ್ಸವದ ಹೂರಣವಾಗಿದೆ. ಈ ಶಾಲೆ ಇನ್ನೂ ಉತ್ತಮ ಹೆಸರು ಗಳಿಸಲಿ ಎಂದು ಆಶಿಸಿದರು.
ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಗ್ರಾ.ಪಂ. ಸದಸ್ಯರಾದ ರಾಮಕೃಷ್ಣ ಹೆಗಡೆ ಹಾಗೂ ಪ್ರಕಾಶ ನಾಯ್ಕ ಸಾಂದರ್ಭಿಕ ಮಾತನಾಡಿದರು. ಪ್ರತಿಭಾ ಪುರಸ್ಕಾರ ವಿತರಿಸಿದ ಕುಂದರಗಿ ಉಪವಲಯಾರಣ್ಯಾಧಿಕಾರಿ ಬೀರಪ್ಪ ಪಟಗಾರ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಯಾವುದೇ ಬಗೆಯ ಒತ್ತಡ ಹೇರದೇ, ಅವರ ಇಚ್ಛೆಗನುಗುಣವಾದ ಶೈಕ್ಷಣಿಕ ಅವಕಾಶ ಕಲ್ಪಿಸಬೇಕು. ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ, ಮೊಬೈಲ್ ಬಳಕೆಗೆ ಮಿತಿ ವಿಧಿಸಬೇಕು ಎಂದರು.
ಮಂಚೀಕೇರಿ ಸಿ.ಆರ್.ಪಿ. ಕೆ.ಆರ್.ನಾಯ್ಕ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಲಭ್ಯವಿದ್ದರೂ ಕೆಲವರು ಖಾಸಗಿ ಶಾಲೆಗಳತ್ತ ಒಲವು ತೋರುತ್ತಿರುವುದು ಅಚ್ಚರಿದಾಯಕವಾಗಿದ್ದು, ಈ ಕುರಿತು ಪಾಲಕರು ಗಂಭೀರವಾಗಿ ಚಿಂತಿಸಬೇಕು ಎಂದರು.
ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷೆ ಯಮುನಾ ಸಿದ್ದಿ ವಹಿಸಿದ್ದರು. ಉಪಾಧ್ಯಕ್ಷೆ ಸೌಮ್ಯಾ ನಾಯ್ಕ ಮತ್ತಿತರರು ವೇದಿಕೆಯಲ್ಲಿದ್ದರು.
ಅದಿತಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ದತ್ತಾತ್ರೇಯ ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಮುರಳೀಧರ ಶಿರಸಾಟ್ ಮತ್ತು ಪೂರ್ಣಿಮಾ ನಾಯ್ಕ ನಿರ್ವಹಿಸಿದರು. ಮುಖ್ಯಾಧ್ಯಾಪಕ ನಾಗಪ್ಪ ಜಿ.ಎಚ್. ವರದಿ ವಾಚಿಸಿದರು. ಸಹಶಿಕ್ಷಕಿ ಭವ್ಯಾ ಪಟಗಾರ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಶಿರಸಿಯ ಕಲಾಭಾರತಿ ತಂಡದ ಕಲಾವಿದರಿಂದ ಗೊಂಬೆಯಾಟ, ಚಿತ್ರಕಲೆ, ಸಂಗೀತ, ಮಿಮಿಕ್ರಿ ಮತ್ತು ಸಂಗೊಳ್ಳಿರಾಯಣ್ಣ ರೂಪಕ ಪ್ರದರ್ಶನಗೊಂಡವು.

Share This
300x250 AD
300x250 AD
300x250 AD
Back to top