ಹೊನ್ನಾವರ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಜ. ೨೫ ರಂದು ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ತಹಸೀಲ್ದಾರ ಪ್ರವೀಣ ಕರಾಂಡೆ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವವಾದುದು. ಜಿಲ್ಲೆಯ ಪತ್ರಕರ್ತರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ತಾಲೂಕು ಆಡಳಿತವು ಪತ್ರಿಕಾ ಸಂಘದ ಜೊತೆ ಸದಾ ಕಾಲ ಇರಲಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಮಾತನಾಡಿ ಪತ್ರಿಕಾ ಸಂಘಕ್ಕೆ ೫೦ ವರ್ಷದ ಸಂಭ್ರಮವನ್ನು ವರ್ಷವಿಡೀ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಆಚರಿಸಿ ಸಮಾರೋಪ ಸಮಾರಂಭ ಹೊನ್ನಾವರದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ೧೦-೩೦ ಗಂಟೆಗೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಸಚಿವ ಮಂಕಾಳ ವೈದ್ಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಜಿಲ್ಲಾ ಪತ್ರಕರ್ತರ ಯಾದಿಯನ್ನು ಶಾಸಕ ದಿನಕರ ಶೆಟ್ಟಿ ಬಿಡುಗಡೆಗೊಳಿಸುವರು. ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಪತ್ರಕರ್ತ ರವೀಂದ್ರ ಭಟ್, ಸಂಘದ ರಾಜ್ಯಧ್ಯಕ್ಷ ಶಿವಾನಂದ ತಗಡೂರು, ಜಿಲ್ಲೆಯ ಶಾಸಕರು, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳುವರು. ಸಂಘದ ಸಂಸ್ಥಾಪಕ ಸದಸ್ಯ ಟಿ.ಎಂ.ಸುಬ್ಬರಾಯ ದಿಕ್ಸೂಚಿ ಭಾಷಣ ಮಾಡುವರು. 2023 ನೇ ಸಾಲಿನ ಕೆ. ಶ್ಯಾಮರಾವ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಮೋಹನ ಹೆಗಡೆ ಹಾಗೂ ಜಿ.ಎಸ್.ಹೆಗಡೆ ಅಜ್ಜೀಬಳ ಪುರಸ್ಕಾರವನ್ನು ಹೊನ್ನಾವರ ಪತ್ರಕರ್ತ ಸತೀಶ ತಾಂಡೇಲ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಹಿರಿಯ ಪತ್ರಕರ್ತ ಜಿ.ಯು.ಭಟ್ ಮಾತನಾಡಿ, ಜಿಲ್ಲೆಯ ಸಮಸ್ಯೆ ಬಗ್ಗೆ ಒಟ್ಟಾಗಿ ಎದುರಿಸಲು ಹುಟ್ಟಿಕೊಂಡ ಪತ್ರಿಕಾ ಮಂಡಳಿಯು ಹಲವು ಏಳುಬೀಳುಗಳನ್ನು ಅನುಭವಿಸಿ ೫೦ ವಸಂತ ಪೂರೈಸಿದೆ. ಇಂದು ಸ್ವಂತ ಜಾಗ ಖರೀದಿ ಮಾಡಿ ಭವನ ನಿರ್ಮಾಣಗೊಂಡಿದೆ. ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗುವ ಹಾಗೆ ಈ ಕಾರ್ಯಕ್ರಮ ಜರುಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಸಂಘದ ತಾಲೂಕು ಅಧ್ಯಕ್ಷ ಸತೀಶ ತಾಂಡೇಲ್ ಮಾತನಾಡಿ ಹೊನ್ನಾವರದಲ್ಲಿ ನಡೆಯುವ ಸಮಾರೋಪ ಸಮಾರಂಭ ಯಶ್ವಸಿಗೊಳಿಸಲು ಎಲ್ಲರೂ ಒಗ್ಗೂಡಿ ಪ್ರಯತ್ನಿಸಿ ಕಾರ್ಯಕ್ರಮ ಯಶ್ವಸಿಗೊಳಿಸೋಣ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಎಚ್.ಎಂ.ಮಾರುತಿ, ರಾಧಾಕೃಷ್ಣ ಭಟ್, ತಾಲೂಕು ಕಾರ್ಯದರ್ಶಿ ವಿಶ್ವನಾಥ ಸಾಲ್ಕೋಡ, ಖಜಾಂಚಿ ಶಿವಾನಂದ ಮೇಸ್ತ, ಸದಸ್ಯರಾದ ಕೃಷ್ಣಮೂರ್ತಿ ಭಟ್, ಮುರಳೀಧರ ಗಾಯ್ತೊಂಡೆ, ನಾಗರಾಜ ನಾಯ್ಕ, ಶ್ರೀಧರ ನಾಯ್ಕ, ವಿ.ಪಿ.ಮೇಸ್ತ ಉಪಸ್ಥಿತರಿದ್ದರು.