ಶಿರಸಿಯಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನಾ ಸಭೆ| ಹಸುವಿನ ಕೆಚ್ವಲು ಕೊಯ್ದವನ ವಿರುದ್ಧ ಕ್ರಮಕ್ಜೆ ಆಗ್ರಹ
ಶಿರಸಿ: ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಮೇಲೆ ನಮ್ಮ ಹಿಂದುಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸಗಳು ಪದೇ ಪದೇ ನಡೆಯುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಂದುಗಳ ತಾಕತ್ತು ತೋರಿಸುವ ಕೆಲಸ ಆಗಬೇಕಿದೆ ಎಂದು ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ್ ಹೇಳಿದರು.
ಅವರು ಬುಧವಾರ ಶಿರಸಿ ನಗರದಲ್ಲಿ ಬಿಜೆಪಿ ರೈತಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿ, ರಾಜ್ಯದಲ್ಲಿ ಆರಕ್ಷಕರಿಗೆ ಭದ್ರತೆಯಿಲ್ಲ. ಗೋವುಗಳಿಗೆ ರಕ್ಷಣೆಯಿಲ್ಲ. ಗೋಮಾತೆಯ ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಸನಾತನ ಧರ್ಮದ ಸಂಸ್ಕೃತಿಯಲ್ಲಿ ಗೋವು ಆಧಾರಿತ ಕೃಷಿ ಒಂದು ಬಹುಮುಖ್ಯವಾದ ವಿಚಾರವಾಗಿದ್ದು, ಗೋವುಗಳಿಗೆ, ಮನುಷ್ಯರಿಗೆ ಮತ್ತು ಪ್ರಕೃತಿಗೆ ಅವಿನಾಭಾವ ಸಂಬಂಧವಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ಒಟ್ಟು 15 ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ಪ್ರಾರಂಭಿಸಿದೆ. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಗೋಶಾಲೆಗಳಿಗೆ ಅನುದಾನವನ್ನುಕಡಿತಗೊಳಿಸಿ ಅದರ ಮೂಲ ಉದ್ದೇಶಗಳಿಗೆ ತೊಂದರೆ ನೀಡುವ ಮೂಲಕ ಗೋಶಾಲೆಗಳನ್ನು ಮುಚ್ಚಲು ಹೊರಟಿರುವದು ರಾಜ್ಯದ ಮತದಾರರಿಗೆ ಮಾಡಿದ ಅನ್ಯಾಯವಾಗಿದೆ. ರಾಜ್ಯದಲ್ಲಿ 1.10 ಕೋಟಿ ಜಾನುವಾರುಗಳಿದ್ದು, ಇವುಗಳ ರಕ್ಷಣೆ ಮಾಡಲು ಮತ್ತು ಹಾಲು ಉತ್ಪಾದಕರಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳನ್ನು ರೂಪಿಸಿದೆ. ಈ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ. ಈ ವಿಫಲತೆಯು ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಯನ್ನು ತೋರಿಸುತ್ತಿದೆ. ಗೋಶಾಲೆಗಳನ್ನು ಮುಚ್ಚುವ ಮುಖಾಂತರ ಗೋ ಕಳ್ಳಸಾಕಾಣಿಕೆಯನ್ನು ಉತ್ತೇಜನ ನೀಡುವಂತೆ ನಡೆದುಕೊಳ್ಳುತ್ತಿದೆ. ಗೋಶಾಲೆಗಳನ್ನು ಪುನರಾರಂಭಿಸಬೇಕು ಮತ್ತು ಗೋಶಾಲೆಗಳಿಗೆ ವಿಶೇಷ ಅನುದಾನವನ್ನು ನೀಡಬೇಕು. ಕೇಂದ್ರ ಪುರಸ್ಕೃತ ಗೋ ಆಧಾರಿತ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಕ್ರಮ ಕೈಕೊಳ್ಳಬೇಕು. ಈ ರಾಜ್ಯದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು. ಚಾಮರಾಜಪೇಟೆಯಲ್ಲಿ 3 ಗೋವುಗಳ ಕೆಚ್ಚಲು ಕೊಯ್ದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಎನ್ಕೌಂಟರ್ ಮಾಡಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದ ರೈತ ವಿರೋಧ ನೀತಿಯನ್ನು ರೈತ ಮೋರ್ಚಾ ಉಗ್ರವಾಗಿ ಖಂಡಿಸುತ್ತದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಜಿಲ್ಲಾ ಹಾಗೂ ರಾಜ್ಯ ರೈತ ಮೋರ್ಚಾದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಮಾತನಾಡಿ, ಹಿಂದೂ ಧಾರ್ಮಿಕ ಭಾವನೆಗಳನ್ನು ಹತ್ತಿಕ್ಕುವ ಘಟನೆ ಪದೇ ಪದೇ ನಡೆಯುತ್ತಿದೆ. ಬಂಧಿಸಿದ ಆರೋಪಿಯನ್ನು ಬುದ್ಧಿಮಾಂದ್ಯ ಎಂದು ಬಿಂಬಿಸಲು ಹೊರಟಿದ್ದಾರೆ. ಭಯೋತ್ಪಾದಕ, ನಕ್ಸಲ್ ಬೆಂಬಲ ನೀಡುವ ಸಮಾಜಘಾತುಕ ಸಿದ್ದರಾಮಯ್ಯ ಎಂದು ಹೇಳಿದರೂ ತಪ್ಪಿಲ್ಲ. ನಕ್ಸಲರಿಗೆ ಪ್ಯಾಕೇಜ್ ನೀಡುವ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ತಾಯಿ ಹಾಲು ಕುಡಿದ ನಂತರ ನಾವು ಗೋವಿನ ಹಾಲು ಕುಡಿಯುತ್ತೇವೆ. ಆ ಗೋಮಾತೆಯ ಕೆಚ್ಚಲು ಕತ್ತರಿಸಿ, ವಿಕೃತಿ ಮೆರೆದಿದ್ದಾರೆ. ಬೇಜವಾಬ್ದಾರಿಯಿಂದ ವರ್ತಿಸುವ ಸಿದ್ದರಾಮಯ್ಯನವರಿಗೆ ಅಧಿಕಾರದ ದರ್ಪ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ ನ ಪ್ರತಿಭಾ ಭಟ್ಕಳ ಮಾತನಾಡಿ, ಸನಾತನ ಧರ್ಮದಲ್ಲಿ ಗೋವುಗಳಿಗೆ ಬಹಳ ಪ್ರಾಮುಖ್ಯತೆಯಿದ್ದು, ಗೋಮಾತೆಯ ಕೆಚ್ಚಲು ಕೊಯ್ದ ಹೇಡಿಗೆ ತಕ್ಕ ಶಾಸ್ತಿ ಆಗಬೇಕು. ಜಿಹಾದಿ ಮಾನಸಿಕತೆ ಹೊಂದಿರುವ ವ್ಯಕ್ತಿಗಳಿಂದ ಹೀನ ಕೃತ್ಯ ನಡೆಯುತ್ತಿದೆ. ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಜಮೀರ್ ಅಹಮ್ಮದ್ ಖಾನ್ ಬೆಂಬಲಿಗರಿಂದ ಚಾಮರಾಜಪೇಟೆಯಲ್ಲಿ ಹೀನ ಕೃತ್ಯ ನಡೆದಿದ್ದು, ಕರ್ನಾಟಕವು ಔರಂಗಜೇಬನ ಸಾಮ್ರಾಜ್ಯವಾಗಿದೆ. ರಾಜ್ಯದ ಹಿಂದೂಗಳು ಎಚ್ಚೆತ್ತುಕೊಳ್ಳುವ ಅನಿವಾರ್ಯ ಅತ್ಯವಶ್ಯವಾಗಿದೆ ಎಂದರು.
ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಹಾಗೂ ಹಿಂದೂಪರ ಸಂಘಟನೆಗಳ ವತಿಯಿಂದ ಸಹಾಯಕ ಆಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್ಟ, ಪ್ರಮುಖರಾದ ಉಪೇಂದ್ರ ಪೈ, ಆರ್.ವಿ.ಹೆಗಡೆ ಚಿಪಗಿ, ವೀಣಾ ಶೆಟ್ಟಿ, ಗಣಪತಿ ನಾಯ್ಕ, ನಾಗರಾಜ ನಾಯ್ಕ, ರೇಖಾ ಹೆಗಡೆ ಕಂಪ್ಲಿ, ರವಿ ಚಂದಾವರ, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ ಕರ್ಕಿ, ನಂದನ ಸಾಗರ, ಶ್ರೀಕಾಂತ ನಾಯ್ಕ, ರವಿಶೆಟ್ಟಿ ಮತ್ತಿತರರು ಇದ್ದರು.
ಕೋಟ್:
ದೇಶದಲ್ಲಿ ಕೃಷಿಯು ಉಳಿದಿದ್ದರೆ ಅದು ಗೋಮಾತೆಯ ಕಾಣಿಕೆ. ಆದರೆ ರಾಜ್ಯದ ಕೋಟ್ಯಾಂತರ ಜನರ ಭಾವನೆಯೊಂದಿಗೆ ಬೆರೆತಿರುವ ಗೋಮಾತೆಯನ್ನು ಸಂರಕ್ಷಣೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಅಸಡ್ಡೆಯನ್ನು ತೋರಿಸುತ್ತಿದೆ. – ರಮೇಶ ನಾಯ್ಕ ಕುಪ್ಪಳ್ಳಿ, ರೈತಮೋರ್ಚಾ ಜಿಲ್ಲಾಧ್ಯಕ್ಷ