ಸಿದ್ದಾಪುರ: ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕವಾದ ಯೋಚನೆಗಳು ಹೆಚ್ಚಾಗಿ ನಕಾರಾತ್ಮಕ ಯೋಚನೆಗಳು ಕಡಿಮೆಯಾಗಬೇಕು. ಇದರಿಂದ ಮಕ್ಕಳಲ್ಲಿ ಆತ್ಮಹತ್ಯೆಯಂತಹ ದುರಾಲೋಚನೆಗಳು ಕಡಿಮೆಯಾಗಿ ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ವಿಜಯಲಕ್ಷ್ಮಿ ದಾನರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-2025ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೋವರ್ಸ್ ಮತ್ತು ರೇಂಜರ್ಸ್, ಯುವ ರೆಡ್ ಕ್ರಾಸ್ ಹಾಗೂ ಇತರೆ ಘಟಕಗಳ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.
ಜೀವನದಲ್ಲಿ ನೆಮ್ಮದಿಯಿಂದ ಇರಲು ಕೇವಲ ಹಣ. ಆಸ್ತಿ, ಸಂಪತ್ತು ಇವುಗಳು ಮಾತ್ರ ಮುಖ್ಯವಲ್ಲ. ಶಿಕ್ಷಣ, ಪ್ರೀತಿ, ವಿಶ್ವಾಸ, ನಂಬಿಕೆ ಇಡುವಂತಹ ನಡವಳಿಕೆಗಳು, ನಾವು ಮಾಡುವ ಕಾರ್ಯದಲ್ಲಿ ಶ್ರದ್ಧೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ನಾರಾಯಣ ನಾಯ್ಕ ಮಕ್ಕಳು ಸಂಸ್ಕೃತಿ ಮತ್ತು ಸಂಸ್ಕಾರವನ್ನು ತಮ್ಮಲ್ಲಿ ರೂಢಿಸಿಕೂಂಡು ವಿಚಾರಗಳನ್ನು ಹೇಗೆ ಪರಾಮರ್ಶಿಸಬೇಕು, ಜೀವನದಲ್ಲಿ ಶಿಸ್ತು, ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಹಿರಿಯ ಸಹಾಯಕ ಪ್ರಾಧ್ಯಾಪಕಿ ಡಾ.ರಶ್ಮಿ ಎನ್. ಕರ್ಕಿ, ಯೂತ್ ರೆಡ್ ಕ್ರಾಸಿನ ಸಂಚಾಲಕ ಡಾ. ಚೇತನ್ ಕುಮಾರ್, ರೇಂಜರ್ಸ ಸಂಚಾಲಕ ಸಮೀನಾ ಆರ್. ಎಸ್ .ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ ಅವರ ಪರಿನಿರ್ವಾಣ ದಿನದ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಕ್ರೀಡಾ ಸಂಚಾಲಕ ನಾರಾಯಣ ಗೌಡ ಸ್ವಾಗತಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಅನಿಜ ಎಲ್. ವಂದಿಸಿದರು. ವಿದ್ಯಾರ್ಥಿನಿ ವಿನುತಾ ಗೌಡ ಕಾರ್ಯಕ್ರಮ ನಿರ್ವಹಿಸಿದರು.