Slide
Slide
Slide
previous arrow
next arrow

ಜಿಲ್ಲೆಯ ಸರಕಾರಿ ಕಚೇರಿ ಕಟ್ಟಡಗಳ ಮೇಲ್ಛಾವಣಿ ಮೇಲೆ ಸೋಲಾರ್ ಘಟಕ ಸ್ಥಾಪನೆ

300x250 AD

ಜಿಲ್ಲೆಯ ಸರಕಾರಿ ಕಚೇರಿ ಕಟ್ಟಡಗಳ ಮೇಲ್ಛಾವಣಿ ಮೇಲೆ ಸೋಲಾರ್ ಘಟಕ ಸ್ಥಾಪನೆ

ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳು ತಮ್ಮ ಕಟ್ಟಡದಲ್ಲಿನ ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ಪರಿಸರ ಸ್ನೇಹಿಯಾಗಿ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ 2551 ಸರಕಾರಿ ಕಟ್ಟಡಗಳ ಮೇಲ್ಛಾವಣಿಗಳ ಮೇಲೆ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.

ಹೆಸ್ಕಾಂ ಇಲಾಖೆಯಲ್ಲಿನ ಆರ್.ಆರ್. ಸಂಖ್ಯೆಯ ಮಾಹಿತಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 2697 ಸರಕಾರಿ ಕಟ್ಟಡಗಳಿದ್ದು ಅವುಗಳಲ್ಲಿ 73 ಕಟ್ಟಡಗಳ ಮೇಲ್ಛಾವಣಿಯಲ್ಲಿ ಈಗಾಗಲೇ ವಿವಿಧ ಯೋಜನೆಗಳ ಮೂಲಕ ಸೌರ ವಿದ್ಯುದೀಕರಣ ಆಗಿದ್ದು, 73 ಕಟ್ಟಡಗಳಲ್ಲಿ ವಿವಿಧ ಕಾರಣಗಳಿಂದ ಸೋಲಾರ್ ಸ್ಥಾವರಗಳನ್ನು ಅಳವಡಿಸುವುದು ಕಾರ್ಯಸಾದ್ಯವಿಲ್ಲವೆಂದು ಗುರುತಿಸಲಾಗಿದ್ದು, ಬಾಕಿ ಉಳಿದ 2551 ಸರಕಾರಿ ಕಟ್ಟಡಗಳ ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಸ್ಥಾವರ ಅಳವಡಿಸುವ ಕುರಿತಂತೆ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ.
ಜಿಲ್ಲೆಯಲ್ಲಿ ಹೆಸ್ಕಾಂನ ಶಿರಸಿ ವಿಭಾಗದಲ್ಲಿ 650 ಸರಕಾರಿ ಕಟ್ಟಡಗಳಿದ್ದು, ಇವುಗಳಲ್ಲಿ ಈಗಾಗಲೇ 25 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದ್ದು, 625 ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೋಲಾರ್ ಸ್ಥಾವರ ಅಳವಡಿಸಬಹುದಾಗಿದ್ದು, ದಾಂಡೇಲಿ ವಿಭಾಗದ 537 ಕಟ್ಟಡಗಳಲ್ಲಿ 26 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದ್ದು, 510 ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೋಲಾರ್ ಸ್ಥಾವರ ಅಳವಡಿಸಬಹುದಾಗಿದೆ. ಕಾರವಾರ ವಿಭಾಗದ 1359 ಕಟ್ಟಡಗಳಲ್ಲಿ 12 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದ್ದು, 1277 ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೋಲಾರ್ ಸ್ಥಾವರ ಅಳವಡಿಸಬಹುದಾಗಿದ್ದು 70 ಕಟ್ಟಡಗಳಲ್ಲಿ ಸ್ಥಾವರಗಳನ್ನು ಅಳವಡಿಸುವುದು ಕಾರ್ಯಸಾದ್ಯವಿಲ್ಲವಾಗಿದೆ. ಹೊನ್ನಾವರ ವಿಭಾಗದ 151 ಕಟ್ಟಡಗಳಲ್ಲಿ 10 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದ್ದು, 139 ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೋಲಾರ್ ಸ್ಥಾವರ ಅಳವಡಿಸಬಹುದಾಗಿದ್ದು 2 ಕಟ್ಟಡಗಳಲ್ಲಿ ಸ್ಥಾವರಗಳನ್ನು ಅಳವಡಿಸುವುದು ಕಾರ್ಯಸಾದ್ಯವಿಲ್ಲವಾಗಿದೆ.

300x250 AD

ಪ್ರಸ್ತುತ ಈಗಾಗಲೇ ಸೌರ ವಿದ್ಯುದೀಕರಣಗೊಂಡಿರುವ 73 ಸರಕಾರಿ ಕಟ್ಟಡಗಳಲ್ಲಿ ಒಟ್ಟು 406.86 ಕಿ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಸೌರ ವಿದ್ಯುದೀಕರಣಗೊಳಿಸಲು ಗುರುತಿಸಲಾಗಿರುವ 2551 ಸರಕಾರಿ ಕಟ್ಟಡಗಳಿಂದ 73,299 ಕಿ.ವ್ಯಾ, ವಿದ್ಯುತ್ ಉತ್ಪಾದನೆಯಾಗುವ ಗುರಿ ಹೊಂದಲಾಗಿದೆ.
ಜಿಲ್ಲೆಯ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಶಾಲೆಗಳು, ಅಂಗನವಾಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಕಟ್ಟಡಗಳ ಮತ್ತು ಮೇಲ್ಚಾವಣಿಯ ಸ್ಥಿತಿಗತಿ ಕುರಿತಂತೆ ಸಮಗ್ರ ವರದಿ ಸಂಗ್ರಹಿಸಲಾಗುತ್ತಿದ್ದು, ಈ ಕಟ್ಟಡಗಳ ಮೇಲ್ಚಾವಣಿಯಲ್ಲಿ ಸೋಲಾರ್ ಘಟಕಗಳನ್ನು ಅಳವಡಿಸುವ ಕುರಿತಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಖರ ಮಾಹಿತಿ ಸಿದ್ದಪಡಿಸಲಿದ್ದು ಇದರ ಆಧಾರದಲ್ಲಿ ಹೆಸ್ಕಾಂ ಇಲಾಖೆ ವತಿಯಿಂದ ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೋಲಾರ್ ಘಟಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸಾಂಪ್ರದಾಯಿಕ ಮೂಲದಿಂದ ಉತ್ಪಾದಿಸುವ ವಿದ್ಯುತ್ ಉತ್ಪಾದನೆಯ ವೆಚ್ಚದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವುದು ಮಾತ್ರವಲ್ಲದೇ ಪರಿಸರ ಮತ್ತು ಜೀವ ವೈವಿಧ್ಯತೆಯ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿದ್ದು, ಈ ವಿದ್ಯುತ್ ಮೂಲಗಳು ಕಾಲಕ್ರಮೇಣ ನಶಿಸಲಿವೆ. ಸೂರ್ಯಶಕ್ತಿಯಿಂದ ಪಡೆಯುವ ವಿದ್ಯುತ್‌ಗೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ ಮತ್ತು ಶಾಶ್ವತ ಮತ್ತು ನಿರಂತರವಾಗಿ ವಿದ್ಯುತ್ ಪಡೆಯಬಹುದಾಗಿರುವುದು ಮಾತ್ರವಲ್ಲದೇ ಇದು ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಕಟ್ಟಡಗಳ ಮೇಲ್ಛಾವಣಿಯನ್ನು ವ್ಯವಸ್ಥಿತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ದೇಶದಾದ್ಯಂತ 1 ಕೋಟಿ ಕುಟುಂಬಗಳಿಗೆ ಸೌರ ಮೇಲ್ಛಾವಣಿ ಸ್ಥಾಪಿಸುವ ಗುರಿ ಹೊಂದಲಾಗಿದೆ. ಇದರಿಂದ ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್ ವರೆಗೆ ಉಚಿತ/ಕಡಿಮೆ ದರದ ವಿದ್ಯುತ್ ಒದಗಿಸಲು ಸಹಾಯ ಮಾಡಲಾಗುತ್ತಿದೆ. ಈ ಯೋಜನೆಯಿಂದ ಗ್ರಾಹಕರು ತಮ್ಮ ಮನೆಗೆ ತಾವೇ ವಿದ್ಯುತ್ ಉತ್ಪಾದಿಸುವ ಜೊತೆಗೆ ಹೆಚ್ಚುವರಿ ವಿದ್ಯುತ್‌ನ್ನು ಹೆಸ್ಕಾಂಗೆ ನೀಡಿ ಆರ್ಥಿಕ ಲಾಭ ಪಡೆಯಬಹುದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಗಳ ಮೇಲ್ಚಾವಣಿಯಲ್ಲಿ ಸೋಲಾರ್ ಘಟಕ ಅಳವಡಿಸಲು 1849 ಸಾರ್ವಜನಿಕರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮವನ್ನು ಮಾದರಿ ಸೌರ ಗ್ರಾಮ ಯೋಜನೆಗೆ ಆಯ್ಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, 79 ನೀರಾವರಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತುತ ಜಿಲ್ಲೆಯ ಎಲ್ಲಾ ಸರಕಾರಿ ಕಟ್ಟಡಗಳ ಮೇಲ್ಛಾವಣಿಗಳ ಮೇಲೆ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಕುರಿತಂತೆ ಕಟ್ಟಡಗಳ ಸ್ಥಿತಿಗತಿ ಮತ್ತು ಸ್ಥಳಾವಕಾಶದ ಕುರಿತು ಸಮೀಕ್ಷೆ ಕೈಗೊಳ್ಳಲಾಗಿದ್ದು, ಸಮೀಕ್ಷೆ ನಂತರ ಆದಷ್ಟು ಶೀಘ್ರದಲ್ಲಿ ಸರಕಾರಿ ಕಟ್ಟಡಗಳ ಮೇಲೆ ಸೋಲಾರ್ ಘಟಕಗಳನ್ನು ಅಳವಡಿಸುವ ಕಾರ್ಯ ನಡೆಯಲಿದೆ. ದೀಪಕ್ ಕಾಮತ್, ಅಧೀಕ್ಷ÷ಕ ಇಂಜಿನಿಯರ್, ಹೆಸ್ಕಾಂ, ಶಿರಸಿ.

Share This
300x250 AD
300x250 AD
300x250 AD
Back to top