ಸಿದ್ದಾಪುರ: ತಾಲೂಕಿನ ಕರ್ಕಿಮಕ್ಕಿಯ ದೊಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕರೊಬ್ಬರನ್ನು ಮೂರು
ವರ್ಷಗಳವರೆಗೆ ಅನರ್ಹಗೊಳಿಸಿ ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ಆದೇಶಿಸಿದೆ. ಸುಬ್ರಾಯ ನಾರಾಯಣ ಭಟ್ಟ, ಮತ್ತು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಅನರ್ಹಗೊಂಡವರಾಗಿದ್ದಾರೆ.
ಏನಿದು ಪ್ರಕರಣ:
ದೊಡ್ಮನೆ ಸೊಸೈಟಿಯಲ್ಲಿ ಅಕ್ರಮವಾಗಿದೆ ಎಂದು ದೊಡ್ಮನೆ ಕುಡೆಗೋಡಿನ ಪ್ರಕಾಶ ರಾಮಚಂದ್ರ ಹೆಗಡೆ ಅವರು ಸೊಸೈಟಿ ಅಧ್ಯಕ್ಷ ಸುಬ್ರಾಯ ನಾರಾಯಣ ಭಟ್ಟ, ಮುಖ್ಯ ಕಾರ್ಯ ನಿರ್ವಾಹಕರ ವಿರುದ್ದ
ಮತ್ತು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಹಾಗೂ ಮುಖ್ಯ ಕಾರ್ಯನಿರ್ವಾಹಕರ ವಿರುದ್ದ 2 ಪ್ರತ್ಯೇಕ ಪ್ರಕರಣವನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ದಾಖಲಿಸಿದ್ದರು.
2021-22ನೇ ಸಾಲಿನಲ್ಲಿ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟರ ಅಸಾಮಿ ಖಾತೆ ಸಾಲದ ಬಡ್ಡಿಯನ್ನು ಮತ್ತು ಅಸಲನ್ನು ನೈಜವಾಗಿ ಪಡೆದುಕೊಳ್ಳದೇ ಸಾಲದ ಮಿತಿಯನ್ನು ಹೆಚ್ಚಿಸಿ ಬಡ್ಡಿ ತುಂಬಿದಂತೆ ಕೃತಕವಾಗಿ ತೋರಿಸಿದ್ದಾರೆ. ಅರ್ಹತೆ ಇಲ್ಲದಿದ್ದರೂ ತಮಗೆ ತಾವೇ ಸಾಲದ ಮಿತಿಯನ್ನು ಹೆಚ್ಚಿಸಿ ಮಂಜೂರಿ ಮಾಡಿಕೊಂಡಿದ್ದಾರೆ. ಈ ಮೂಲಕ ಸಂಘಕ್ಕೆ ಪೋಟ್ ನಿಯಮ ಮೀರಿ ಅಪಾರ ಪ್ರಮಾಣದ ಹಾನಿಯನ್ನು ಉಂಟುಮಾಡಿರುತ್ತಾರೆ. ಅದೇ ರೀತಿ ವಿವೇಕ ಸುಬ್ರಾಯ ಭಟ್ಟ ಇವರ ಹೆಸರಿಗೆ ಕೃತಕವಾಗಿ ತೋರಿಸಿ ಅರ್ಹತೆ ಇಲ್ಲದಿದ್ದರೂ ತಮಗೆ ತಾವೇ ಸಾಲದ ಮಿತಿಯನ್ನು ಹೆಚ್ಚಿಸಿ ಮಂಜೂರಿ ಮಾಡಿಕೊಂಡಿದ್ದಾರೆ. ತಮ್ಮ ಕುಟುಂಬದ
ಸದಸ್ಯರಿಗೆ ಅರ್ಹತೆ ಇಲ್ಲದಿದ್ದರೂ ಸೂಕ್ತ ಭದ್ರತೆಯನ್ನು ಪಡೆಯದೇ ಅಪಾರ
ಪ್ರಮಾಣದ ಸಾಲ ನೀಡಿ ಸಂಘಕ್ಕೆ ಲುಕ್ಸಾನು ಪಡಿಸಿದ್ದಾರೆ. ಸಂಘದ ಸಂಪನ್ಮೂಲಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡು ಸಂಘಕ್ಕೆ ಮತ್ತು
ಸದಸ್ಯರಿಗೆ ನಷ್ಟ ಪಡಿಸಿದ್ದು ಈ ಕುರಿತು ಲೆಕ್ಕ ಪರಿಶೋಧನಾ ವರದಿ ಉಲ್ಲೇಖವಾಗಿರುತ್ತದೆ.
ಅಧ್ಯಕ್ಷರ ಮತ್ತು ಕೆಡಿಸಿಸಿ ಮೇಲ್ವಿಚಾರಕರ ಪರಿಶೀಲನಾ ವರದಿಯಲ್ಲಿ ಪತ್ನಿ ಹೆಸರಿನಲ್ಲಿ ಪಡೆದ ಅಸಾಮಿ ಸಾಲವು ಕಟ್ಬಾಕಿ ಆಗಿದ್ದು ನಿಯಮ ಬಾಹಿರವಾಗಿ ಅವರಿಗೆ ರಿಯಾಯಿತಿ ನೀಡಿ ಠರಾವು ಮಾಡಿದ್ದಾರೆ. ಈ ಮೂಲಕ ಸಂಘಕ್ಕೆ ಅಪಾರ ಪ್ರಮಾಣದ ನಷ್ಟವನ್ನು ಉಂಟು ಮಾಡಿರುತ್ತಾರೆ. ಈ ಕಾರಣದಿಂದ ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ದೂರು ದಾಖಲಿಸಿದ್ದರು.
ಎಆರ್ ಕೋರ್ಟ್ ಆದೇಶ:
ಪ್ರಕಾಶ ರಾಮಚಂದ್ರ ಹೆಗಡೆ ಅವರ ದೂರು ಪರಿಗಣಿಸಿದ ಕೋರ್ಟ್ ಪ್ರತಿವಾದಿಗಳಿಗೆ 2024 ಅಕ್ಟೋಬರ್ 22ರಂದು ಕಚೇರಿಗೆ ಹಾಜರಾಗಿ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ನೀಡಿತ್ತು. ಪ್ರತಿವಾದಿಗಳು ಲಿಖಿತ ಹೇಳಿಕೆಯನ್ನು ನೀಡಿ ತಮ್ಮ ಅಹವಾಲನ್ನು ಸಲ್ಲಿಸಿದ್ದರು. ಅಲ್ಲದೆ, ಸಂಘದಲ್ಲಿ ಸದಸ್ಯರ ಹಣಕಾಸಿನ ಅನಿವಾರ್ಯ ಪ್ರಸಂಗಗಳಲ್ಲಿ ಅರ್ಹತೆಗಿಂತ ಹೆಚ್ಚಿಗೆ ಸಾಲ ನೀಡಿದ್ದಿದೆ. ಸಂಘದ ಇತ್ತೀಚಿನ ಬೈಲಾ ಪ್ರಕಾರ ಮಿತಿಗಿಂತ ಹೆಚ್ಚಿಗೆ ಸಾಲ ಹಾಗೂ ಬಡ್ಡಿ ರಿಯಾಯಿತಿ ನೀಡಿಲ್ಲ. ಈ ಬಗ್ಗೆ
ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಣೆ ನಮೂದು ಸಹಿತ ಇರುವುದಿಲ್ಲ. ದೂರುದಾರರು ಈ ಬಗ್ಗೆ ದಾಖಲೆ ನೀಡಿರುತ್ತಾರೆಯೇ ಎಂದು ಲಿಖಿತ ಹೇಳಿಕೆಯಲ್ಲಿ ಕೇಳಿದ್ದರು. ಇವರ ತಕರಾರನ್ನು ವಿಮರ್ಶಿಸಿದ ಎಆರ್ ಕೋರ್ಟ್, ಕೆ.ಡಿ.ಸಿ.ಸಿ ಬ್ಯಾಂಕ್ 2021-22ನೇ ಸಾಲಿನಲ್ಲಿ ನಡೆಸಿದ ಆಂತರಿಕ ತಪಾಸಣೆ ವರದಿ ಆಧರಿಸಿ ಹೀಗೆ ಹೇಳಿದೆ. ಸಂಘದ ಪೋಟ್ ನಿಯಮದ ಪ್ರಕಾರ ಸದಸ್ಯರಿಗೆ ನೀಡಬಹುದಾದ ಸಾಲದ ಪ್ರಕರಣಗಳಲ್ಲಿ ಮಿತಿ ಮೀರಿ ಸಾಲ ನೀಡಿರುವುದು, ಸಂಘದ ಕಾಯ್ದೆ
ಉಲ್ಲಂಘಿಸಿರುವುದು ಸಾಬಿತಾಗಿದೆ. ಇಲಾಖಾ ಅನುಮತಿ ಪಡೆಯದೆ ಏಕಕಾಲಿಕ ಸಾಲದ ತಿರುವಳಿ ಮಾಡಿದೆ. ಇದು ಸಂಘದ ಬೈಲಾ ಉಲ್ಲಂಘನೆಯಾಗಿದೆ. ಹೀಗಾಗಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 29(ಸಿ) 8 (ಬಿ) ರ ಪ್ರಕಾರ ಸಂಘದ ಅಧ್ಯಕ್ಷ ಸುಬ್ರಾಯ ನಾರಾಯಣ ಭಟ್ಟ ಮತ್ತು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಅವರನ್ನು ಆದೇಶದ ದಿನಾಂಕ ನವೆಂಬರ್ 25,2025 ರಿಂದ ಮುಂದಿನ 3 ವರ್ಷಗಳವರೆಗೆ ದೊಡ್ಮನೆ ಸಹಕಾರಿ ಸಂಘದಲ್ಲಿ ಮತ್ತು ಇತರೇ ಯಾವುದೇ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರನ್ನಾಗಿ ಮುಂದುವರಿಯಲು ಹಾಗೂ ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸಿ ಆರಿಸಿ ಬರಲು ಅನರ್ಹರನ್ನಾಗಿ ಘೋಷಿಸಲಾಗಿದೆ ಎಂದು ತನ್ನ ಆದೇಶದಲ್ಲಿ ಹೇಳಿದೆ.