ಶಿರಸಿ ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ
ಶಿರಸಿ: ಅಡಕೆ ಬೆಳೆ ವಿಮೆ ಕಳೆದ ವರ್ಷ ಆ.1ರಿಂದ ಆರಂಭವಾಗಿ ಜು.31 ತನಕ ವಿಮೆ ಇದೆ. ವಿಮಾ ಕಂಪನಿಗೆ ವರದಿ ಹೋಗಿದ್ದು, ಎರಡು ಮೂರು ದಿನದಲ್ಲಿ 1 ಹೆಕ್ಟೇರಿಗೆ 1.28 ಲಕ್ಷ ರೂ. ಬೆಳೆ ವಿಮೆ ಇದೆ. ಕೊಳೆ ರೋಗ, ಮಳೆ ಹೆಚ್ಚಾದರೆ 38 ಸಾವಿರ ರೂ. ಇಡಲಾಗಿದೆ. ಇನ್ನು ವಿಮೆ ಎಷ್ಟು ಬರುತ್ತದೆ ಎಂದು ನೋಡಬೇಕಾಗಿದೆ ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕ ಬಿ.ಪಿ.ಸತೀಶ ಮಾಹಿತಿ ಹೇಳಿದ್ದಾರೆ.
ನಗರದ ಮಿನಿ ವಿಧಾನಸೌಧದಲ್ಲಿ ರೈತ, ಸಹಕಾರಿ ಸಂಘಗಳ ಪ್ರಮುಖರ ಜೊತೆ ಸಹಾಯಕ ಆಯುಕ್ತ ಕೆ.ವಿ.ಕಾವ್ಯಾರಾಣಿ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸಭೆಯಲ್ಲಿ ರೈತ ಸಂಘಗಳು ಬೆಳೆ ವಿಮೆ ಕುರಿತ ಮಾಹಿತಿಯ ಅಮರ್ಪಕತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ರೈತ ಸಂಘದ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮಾತನಾಡಿ, ಸಾರ್ವಜನಿಕ ಪ್ರತಿಭಟನೆಯ ಬಳಿಕ ಎರಡೇ ದಿನದಲ್ಲಿ ಸಭೆ ಕರೆದಿದ್ದು, ಪ್ರತಿಭಟನೆಗೆ ಮುಂಚೆ ಸಭೆ ಕರೆದು ಬಗೆಹರಿಸಿದರೆ ಹೆಚ್ಚು ಅನುಕೂಲವಾಗುತ್ತಿತ್ತು. ಬೆಳೆ ವಿಮೆ ಮಾಹಿತಿ ಸಿಗುತ್ತಿಲ್ಲ. ವಿಮೆಯ ಕುರಿತಾಗಿ ಮಿಖರವಾದ ಮಾಹಿತಿ ನೀಡುತ್ತಿದ್ದರೆ ರೈತರಿಗೆ ಉಪಯೋಗವಾಗುತ್ತದೆ ಎಂದರು. ಮುಂದುವರೆದು ಮಾತನಾಡಿ, ಮಳೆ ಮಾಪನ ಸಮಸ್ಯೆಯನ್ನು ಸರಿ ಮಾಡಬೇಕು. ಇದೇ ವೇಳೆ ಬೆಳೆ ಸಾಲ ಮನ್ನಾ, ಹಾವೇರಿ ಶಿರಸಿ ಮಾರ್ಗದ ದುರಸ್ತಿ, ಅತಿಕ್ರಮಣ ಹಕ್ಕು ಪತ್ರ ನೀಡಿ ಬೆಳೆ ವಿಮೆ ಪರಿಹಾರ, ಭತ್ತ ಖರೀದಿ ಕೇಂದ್ರ ಪ್ರಾರಂಭ, ಬದನಗೋಡ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಅಗತ್ಯತೆ, ಬದನಗೋಡ ಭಾಗದಲ್ಲಿ ಪಿಯು ಕಾಲೇಜು ಆರಂಭಿಸುವ ಬಗ್ಗೆ ಬೇಡಿಕೆಯನ್ನಿಟ್ಟರು.
ತಹಸೀಲ್ದಾರ ಶ್ರೀಧರ ಮುಂದಲಮನಿ ಪ್ರತಿಕ್ರಿಯಿಸಿ, ಅಕ್ಕ ಪಕ್ಕ ಗ್ರಾಮಗಳಿದ್ದರೂ ಪಂಚಾಯತ್ ಬೇರೆಯಾದ ಕಾರಣಕ್ಕೆ ವ್ಯತ್ಯಾಸ ಇರುವುದುಕ್ಕೆ ರೈತರಿಗೆ ಕೆಲ ಅನಾನುಕೂಲಗಳಾಗುತ್ತಿವೆ. ಆದರೆ, ರೈತರಿಗೆ ಅನುಕೂಲ ಮಾಡಲೆಂದೇ ವಿಮೆ ಇದೆ ಎಂದರು.
ವಿಮೆ ಹಣ ಕಟ್ಟುವುದೇ ಕಷ್ಟವಾಗಿದೆ. ಹಂಚಿಕೆ ಮಾಡುವ ಹಂತದಲ್ಲಿ ಮಾಹಿತಿ ಇರದೇ ಹೋದರೆ ರೈತರಿಗೆ ಅನ್ಯಾಯವಾದಂತೆಯೇ. ಪಂಚಾಯತ್ ಮಳೆ ಘಟಕ ಮಾಹಿತಿ ಪಡೆಯದೇ ಹೋದರೆ ತಾಲೂಕು ಆಧರಿಸಿ ವಿಮೆ ಕೊಡಲಿ ಎಂದು ರೈತರು ಆಗ್ರಹಿಸಿದರು.
ವಿಮಾ ಕಂಪನಿ ಪ್ರತಿನಿಧಿ ಅಣ್ಣಪ್ಪ ನಾಯ್ಕ ಮಾತನಾಡಿ, ಜುಲೈಗೆ ಅವದ್ಇ ಮುಗಿದಿದೆ. 14020 ರೈತರು, 7035 ಹೆಕ್ಟೇರ್ ಬೆಳೆಗೆ ವಿಮೆ ಆಗಿದೆ. ರೈತರ ಬಾಪ್ತು 4.50 ಕೋಟಿ ಹಣ ಕಟ್ಟಲಾಗಿದೆ. ಸೋಮವಾರ ಉಳಿದ ಮಾಹಿತಿ ಕೊಡಲಾಗುತ್ತದೆ ಎಂದರು.
ಡಿಎಸ್ಪಿ ಗಣೇಶ ಕೆ.ಎಲ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ ಹೆಗಡೆ, ಬಿಇಓ ನಾಗರಾಜ ನಾಯ್ಕ, ಹೆಸ್ಕಾಂ ಎಇಇ ನಾಗರಾಜ ಪಾಟೀಲ, ತಾಲೂಕಾ ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ, ರೈತ ಸಂಘದ ಪ್ರಮುಖರಾದ ಪರಶುರಾಮ ಡಾಂಗೆ, ಜಯಪುತ್ರ ರಂಗಾಪುರ, ಮಲ್ಲಿಕಾರ್ಜುನ ರಂಗಾಪುರ, ರಾಜೇಶ ಕಂಡ್ರಾಜಿ, ಶಶಿ ಉಮ್ಮಡಿ ಇದ್ದರು.