ಸಿದ್ದಾಪುರ: ಪಾಲಕರು ಮಕ್ಕಳಿಗಾಗಿ ಆಸ್ತಿ, ಬಂಗಾರ ಮಾಡಿಡುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ, ಒಳ್ಳೆಯ ಸಂಸ್ಕಾರ ನೀಡಿದರೆ ಅದು ಬಹುದೊಡ್ಡ ಸಂಪನ್ಮೂಲವಾಗುತ್ತದೆ. ತಮ್ಮ ನಿತ್ಯದ ಕಾರ್ಯ, ಕೆಲಸಗಳ ನಡುವೆ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಭೀಮಣ್ಣ ಟಿ.ನಾಯ್ಕ ಹೇಳಿದರು.
ಅವರು ತಾಲೂಕಿನ ಕೊಳಗಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿ ಭಾರತ ಪ್ರಬುದ್ಧವಾದ ದೇಶ. ವಿಶ್ವದಲ್ಲೇ ಅತಿ ಶ್ರೇಷ್ಠ ಪ್ರಜಾಪ್ರಭುತ್ವವನ್ನು ಹೊಂದಿದ ದೇಶ. ಭಾರತ ಇನ್ನಷ್ಟು ಅಭಿವೃದ್ಧಿ ಸಾಧಿಸಲು ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ರಾಜ್ಯ ಮತ್ತು ಕೇಂದ್ರ ಸರಕಾರಗಳು ಯಾವ ಮಗುವೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಶಿಕ್ಷಣದಿಂದ ವಂಚಿತರಾದರೆ ಮಕ್ಕಳು ಅನಾಚಾರದತ್ತ ಮನಸ್ಸು ಕೊಡುತ್ತಾರೆ. ಹಾಗಾಗದಿರಲು ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ ಎಂದರು. ಸರಕಾರಿ ಶಾಲೆಗಳಲ್ಲಿ ಈಗ ಉತ್ತಮ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮಕ್ಕಳಿಗೆ ಬಿಸಿಯೂಟ, ಪೌಷ್ಠಿಕ ಆಹಾರ,ಸಮವಸ್ತ್ರ ಮುಂತಾಗಿ ಬಹುತೇಕ ಎಲ್ಲ ಅಗತ್ಯಗಳನ್ನು ನೀಡಲಾಗುತ್ತಿದೆ. ಮನೆಗಿಂತ ಶಾಲೆಗಳಲ್ಲೇ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಉತ್ತಮ ಶಿಕ್ಷಣ, ಎಲ್ಲ ಸೌಲಭ್ಯಗಳಿದ್ದರೂ ಹೆಚ್ಚಿನ ಡೋನೆಶನ್ ಕೊಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸಲಾಗುತ್ತಿದ್ದು ಸರಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸುವಂತಾಗಬೇಕು. ನಾನು ಖಾಸಗಿ ಶಾಲೆಗಳ ವಿರೋಧದಿಂದ ಈ ಮಾತು ಹೇಳುತ್ತಿಲ್ಲ. ಸರಕಾರ ಜಾರಿಗೊಳಿಸಿದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವದು ಮುಖ್ಯ ಎಂದರು.
ಈ ಸಂದರ್ಭದಲ್ಲಿ ಊರಿನ ಸಾರ್ವಜನಿಕರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ನಮ್ಮ ಜಿಲ್ಲೆಯ ಶಾಲೆಗಳಲ್ಲೂ ಮಕ್ಕಳಿಗೆ ಯಕ್ಷಗಾನ ಕಲಿಕೆಯ ಜೊತೆಗೆ ಸ್ಪರ್ಧೆಗಳನ್ನು ಆಯೋಜಿಸುವಂತಾಗಬೇಕು. ಇದರಿಂದ ನಮ್ಮ ನೆಲದ ಕಲೆಯ ಕುರಿತಾಗಿ ಮಕ್ಕಳಿಗೆ ಅರಿವು, ಆಸಕ್ತಿ ಮೂಡುತ್ತದೆ. ದಕ್ಷಿಣ ಕನ್ನಡದಲ್ಲಿ ಈ ಮಾದರಿ ಯಶಸ್ವಿಯಾಗಿದೆ. ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುದರ್ಶನ ಹೆಗಡೆ ಅಧ್ಯಕ್ಷತೆವಹಿಸಿದ್ದರು. ಗ್ರಾಪಂ ಸದಸ್ಯ ಶ್ರೀಕಾಂತ ಎಲ್.ಭಟ್ಟ, ಸಾಮಾಜಿಕ ಪ್ರಮುಖರಾದ ಕೆ.ಜಿ.ನಾಗರಾಜ, ಸಿ.ಆರ್.ನಾಯ್ಕ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಕೇಶವ ಹೆಗಡೆ ದಂಪತಿಗಳನ್ನು ಸನ್ಮಾನಿಸಲಾಯಿತು.
ಸಿ.ಆರ್.ಪಿ.ಚಂದ್ರೇಗೌಡ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಧರ್ಮಣ್ಣ ನಿರೂಪಿಸಿದರು. ಶಿಕ್ಷಕಿ ಶರಾವತಿ ನಾಯ್ಕ ಸಹಕರಿಸಿದರು.