ಸೀಬರ್ಡ್ ನೌಕಾನೆಲೆ ಸಮಸ್ಯೆ ಕುರಿತು ಚರ್ಚೆ
ಶಿರಸಿ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ನವದೆಹಲಿಯಲ್ಲಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಕಾರವಾರದ ಸೀಬರ್ಡ್ ನೌಕಾನೆಲೆಯಿಂದ ಉಂಟಾಗಿರುವ ಸಮಸ್ಯೆಯ ಕುರಿತು ಚರ್ಚಿಸಿದರು.
ಇದರಲ್ಲಿ ಪ್ರಮುಖವಾಗಿ ಬಾಕಿ ಇರುವ ಭೂ ಪರಿಹಾರವನ್ನು ತಕ್ಷಣವೇ ನೀಡುವಂತೆ ಹಾಗೂ ಬಾಕಿ ಇರುವ ನಾನಾ ಸಮಸ್ಯೆಗಳ ಕಡತಗಳನ್ನು ಅತಿ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಮನವರಿಕೆ ಮಾಡಿದರು. ನೌಕಾ ನೆಲೆಗಾಗಿ ಭೂಮಿ ಕಳೆದುಕೊಂಡವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಸಿ ಬರ್ಡ್ ನೌಕನೆಲೆಯಲ್ಲಿ ನಡೆಯುವ ಉದ್ಯೋಗ ಪರೀಕ್ಷಾ ಕೇಂದ್ರವನ್ನು ಕಾರವಾರದಲ್ಲಿಯೇ ಸ್ಥಾಪಿಸಬೇಕೆಂದು ಮನವಿ ಕೊಟ್ಟು ಸುದೀರ್ಘವಾಗಿ ಚರ್ಚೆ ನಡೆಸಿದರು. ಇದಕ್ಕೆ ಸ್ಪಂದಿಸಿದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿ, ನಿರ್ದೇಶನ ಮಾಡಿದರು ಮತ್ತು ಮುಂದಿನ ದಿನಗಳಲ್ಲಿ ಸಮಸ್ಯೆಯುಂಟಾದಲ್ಲಿ ತುರ್ತುಗತಿಯಲ್ಲಿ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.