Slide
Slide
Slide
previous arrow
next arrow

ಮೀನುಗಾರರ ಜೀವನ ಹಸನಾಗಿಸುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ: ಡಿ.ಕೆ.ಶಿವಕುಮಾರ್

300x250 AD

ಮುರುಡೇಶ್ವರದಲ್ಲಿ ಮತ್ಸ್ಯಮೇಳಕ್ಕೆ ಚಾಲನೆ | ಸಚಿವ ವೈದ್ಯ, ಶಾಸಕ ದೇಶಪಾಂಡೆ, ಭೀಮಣ್ಣ ನಾಯ್ಕ್, ಹೆಬ್ಬಾರ್ ಭಾಗಿ

ಭಟ್ಕಳ: ಮುರುಡೇಶ್ವರ ಆ‌ರ್‌ಎನ್ಎಸ್ ಗಾಲ್ಫ್ ರೆಸಾರ್ಟ್‌ನಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆಯನ್ನು ಉಪ‌ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗುರುವಾರದಂದು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ಮುಖ್ಯಮಂತ್ರಿಗಳು ನಂದಿನಿ ಹಾಲು ಪ್ರಚಾರಕ್ಕೆ ಡಿಲ್ಲಿಗೆ ತೆರಳಿದ್ದಾರೆ. ಮೀನುಗಾರರ ಪ್ರಚಾರಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ಕೊಲ್ಲೂರು ಮುಕಾಂಬಿಕೆ, ಇಡುಗುಂಜಿ ಮಹಾ ಗಣಪತಿ ಮತ್ತು ಮುರುಡೇಶ್ವರದ ಮಹಾ ಶಿವನ ದೇವರ ದರ್ಶನದ ಜೊತೆಗೆ ಈ ಭಾಗದ ಜನರ ದರ್ಶನ ಮಾಡುವ ಸದಾವಕಾಶ ಸಿಕ್ಕಿದೆ. ರೈತ ಭೂಮಿಯಲ್ಲಿ ಕೃಷಿ ಮಾಡಿದರೆ ಮೀನುಗಾರರು ನೀರಿನಲ್ಲಿ ಕೃಷಿ ಮಾಡುತ್ತಾರೆ.ಇಬ್ಬರಿಗೂ ಸಹ ಯಾವುದ ಪ್ರೊಮೋಶನ್ ಇಲ್ಲ. ಯಾವುದೇ ನಿವೃತ್ತಿ ಇಲ್ಲ. ಯಾವುದೇ ಪಿಂಚಣಿ ಇಲ್ಲ. ಇವರಿಗೆ
ಸೂರ್ಯ,ನೀರು ಆಧಾರ. ಇದರಿಂದಲೇ ಅವರು
ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಪರೋಪಕಾರಿಯಾದ ಮೀನುಗಾರರ ಜೀವನ ಹಸನಾಗಬೇಕು ಎನ್ನುವುದೇ ನಮ್ಮ ಸರ್ಕಾರದ ಉದ್ದೇಶ ಎಂದ ಅವರು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಅವಘಡ ಸಂಭವಿಸಿದಲ್ಲಿ ಅವರ ಕುಟುಂಬಕ್ಕೆ ನೀಡುವ ಸಂಕಷ್ಟ ಪರಿಹಾರ ನಿಧಿಯ ಹಣವನ್ನು 8 ಲಕ್ಷದಿಂದ 10 ಲಕ್ಷ ಹಣಕ್ಕೆ ಏರಿಸಿ ಘೋಷಣೆ ಮಾಡಿದರು.

ಉದ್ಯೋಗಕ್ಕಾಗಿ ಮುಂಬಯಿ, ಸೌದಿ, ಬೆಂಗಳೂರಿಗೆ ತೆರಳುತ್ತಿದ್ದು, ಇಲ್ಲಿನ ಯುವಕರಿಗೆ ಉದ್ಯೋಗ‌ ಅವಕಾಶ ಕಲ್ಪಿಸುವ ಗುರಿ ಹೊಂದಿದ್ದೇವೆ. ಈ‌ ನಿಟ್ಟಿನಲ್ಲಿ ನಮ್ಮ ಸರಕಾರದಿಂದ ಕರಾವಳಿಯಲ್ಲಿ ಹೊಸ ಪ್ರವಾಸೋದ್ಯಮ ನೀತಿಯ ಜಾರಿಗೆ ಚಿಂತನೆ ನಡೆದಿದ್ದು, ಈ ಬಗ್ಗೆ ಮುಂದಿನ ದಿನದಲ್ಲಿ ಇದರ ರೂಪುರೇಷೆಗಳನ್ನು ತಿಳಿಸಲಿದ್ದೇವೆ. ಉದ್ಯೋಗ ಸೃಷ್ಟಿ, ಖಾಸಗಿ ಬಂದರು ನಿರ್ಮಾಣ ಮಾಡುವುದು ಇವು ಸಹ ನಮ್ಮ ಸರಕಾರದ ಉದ್ದೇಶವಾಗಿದೆ.
ಮುಂದಿನ ವರ್ಷ ವಿಶ್ವ ಮೀನುಗಾರಿಕಾ ದಿನವನ್ನು ಉಡುಪಿ ಮಂಗಳೂರಿನಲ್ಲಿ ಮಾಡಿ ಅಲ್ಲಿನ ಮೀನುಗಾರರಿಗೂ ಇದರ ಉಪಯೋಗ ಸಿಗುವಂತೆ ಮಾಡಬೇಕು ಎಂದು ಮಂಕಾಳ ವೈದ್ಯರಿಗೆ ಸೂಚಿಸಿದರು.

ಈಗಾಗಲೇ ಸಮೀಕ್ಷೆಯಲ್ಲಿ ಶೇ. 99 ಸಂಕಷ್ಟದಲ್ಲಿ ಮೀನುಗಾರಿದ್ದಾರೆ ಎಂಬ ವರದಿ ಇದೆ. ಈ ನಿಟ್ಟಿನಲ್ಲಿ ಮೀನುಗಾರರ ರಕ್ಷಣೆ ಅವರ ಅಭಿವೃದ್ಧಿಯತ್ತ ನಮ್ಮ ಸರಕಾರ ಯೋಜನೆಯನ್ನು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರ ಚಿಂತನೆ ನಡೆದು ಮಾಡಲಿದ್ದೇವೆ. ಬಯಲು ಸೀಮೆ ರೈತರಂತೆ ಕರಾವಳಿ ಮೀನುಗಾರರ ಸಹಕಾರಕ್ಕೆ ನಮ್ಮ ಕಾಂಗ್ರೆಸ್ ನಿಲ್ಲಲಿದೆ.

ಬೆಲೆ ಏರಿಕೆಯ ಹಿನ್ನೆಲೆ ನಮ್ಮ ಸರಕಾರವು ಚುನಾವಣಾ ಪೂರ್ವದಲ್ಲಿ ನೀಡಿದ 5 ಗ್ಯಾರಂಟಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಇದಕ್ಕೆ ಬಿಜೆಪಿ ಅವರು ಹಿಯಾಳಿಸಿದ್ದರು. ಆದರೆ ಈಗ ಇದೇ ಬಿಜೆಪಿ ನಾಯಕರು ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ರೂ.1700 ಮಾಸಿಕ ಹಣ ನೀಡುವ ಯೋಜನೆ ರೂಪಿಸಿದ್ದಾರೆ. ಈಗ ಇವರು ನಮ್ಮ ಗ್ಯಾರಂಟಿ ಯೋಜನೆಯ ಬಲ‌ ಏನು ಎಂಬುದು ಮತ್ತು ಅವರದ್ದೇ ಬಿಜೆಪಿ ಸರಕಾರದ ಬೆಲೆ ಏರಿಕೆಯ ಪ್ರಭಾವ ಅರಿತಿದ್ದಾರೆ ಎಂದರು.
ಇದೇ ವೇಳೆ ಈ ವರ್ಷ ಸರಕಾರದಿಂದ ಮೀನುಗಾರರ ಕುಟುಂಬಕ್ಕೆ 10 ಸಾವಿರ ಮನೆಯನ್ನು ನೀಡುವ ಗುರಿ ಹೊಂದಿದ್ದೇವೆ ಎಂದು ಘೋಷಣೆ ಮಾಡಿದರು.

ನಂತರ ಸಚಿವ ಮಂಕಾಳ ವೈದ್ಯ ಮಾತನಾಡಿ ಮುಖ್ಯಮಂತ್ರಿಗಳು ಮೀನುಗಾರರ ಜೊತೆಗೆ ಇದ್ದೇನೆ ಎನ್ನುವ ಸಂದೇಶ ನೀಡಿ ಶುಭಾಶಯ ಕೋರಿದ್ದಾರೆ.
ನಮ್ಮ ಜಿಲ್ಲೆ ನನ್ನ ಕ್ಷೇತ್ರದಲ್ಲಿ ನಮ್ಮ ಮೀನುಗಾರರ ಜೊತೆಗೆ ಸಮುದ್ರ ತೀರದಲ್ಲಿ ಅದ್ಭುತ ಕಾರ್ಯಕ್ರಮ ಮಾಡಲು ಸರಕಾರ ಅವಕಾಶ ನೀಡಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ಮೀನುಗಾರರ ಏಳಿಗೆಗೆ ಶ್ರಮಿಸುವ ಉದ್ದೇಶ ಹೊಂದಿದ್ದೇನೆ. ನಮ್ಮ ಸರಕಾರ ರಚನೆಯಾದ ಮೇಲೆ ಮೀನುಗಾರರ ಸಂಕಷ್ಟಕ್ಕೆ ಅವರ ಸಮಸ್ಯೆಗಳಿಗೆ ಸಾಕಷ್ಟು ಯೋಜನೆಯನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದೇವೆ ಎಂದರು. 13 ಬಂದರುಗಳಿದ್ದು ಈ ಪೈಕಿ ಭಟ್ಕಳದ ಅಳ್ವೇಕೋಡಿ ಮತ್ತು ತೆಂಗಿನಗುಂಡಿ ಮೇಲ್ದರ್ಜೆಗೆರಿಸಿದ್ದೇನೆ. ಉಳಿದ ಬಂದರುಗಳ ಅಭಿವೃದ್ಧಿ ಮಾಡಿಸುವ ಚಿಂತನೆ ನಡೆಯುತ್ತಿದೆ. ಮಂಗಳೂರಿನಲ್ಲಿ ಈಗಾಗಲೇ ಬಂದರು ನಿರ್ಮಾಣ ಮುಕ್ತಾಯದ ಹಂತದಲ್ಲಿದೆ.
ಮುರುಡೇಶ್ವರದಲ್ಲಿ ಒಟ್ಟು 400 ಕೋಟಿ ರೂ.‌ ಬಂದರು ನಿರ್ಮಾಣ ಚಿಂತನೆ ನಡೆದಿದ್ದು, ಈ ಪೈಕಿ ಒಂದು ಕಡೆ ಬಂದರು ಇನ್ನೊಂದು ಕಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ಮಾಡಲಾಗಿದೆ. ಮೀನುಗಾರಿಕೆ ಇಲಾಖೆ, ಮೀನುಗಾರರ ಅಭಿವೃದ್ಧಿ ನನ್ನ‌ ಜವಾಬ್ದಾರಿಯಾಗಿದೆ.

300x250 AD

ಇನ್ನು ಇಷ್ಟು ವರ್ಷಗಳ‌ ಕಾಲ ಸರಕಾರಗಳು ಮೀನುಗಾರರ ಸಂಕಷ್ಟ ಪರಿಹಾರ ಹಣವನ್ನು 6 ಲಕ್ಷ ನೀಡುತ್ತಿದ್ದು ಅದು ಸಹ ಹಿಂದಿನ ಸರಕಾರ ಮೀನುಗಾರರಿಗೆ ವಿತರಿಸಿಲ್ಲ. ಆದರೆ ನಾನು ಅಧಿಕಾರ ಸ್ವೀಕರಿಸಿದ ಮೇಲೆ‌ 8 ಲಕ್ಷ ಹಣವನ್ನು ಏರಿಸಿ 24 ಗಂಟೆಯೊಳಗೆ ಮೀನುಗಾರರ ಕೈಗೆ ಸೇರಿಸಿ ಅವರು ನೆಮ್ಮದಿಯಿಂದ ಬದುಕುವಂತೆ ಮಾಡಿದ್ದೇವೆ. ಮೀನುಗಾರರ ಕೈ ಇನ್ನೊಬ್ಬರಿಗೆ ಕೈ ಚಾಚುವಂತಿರಬೇಕೆ ಹೊರತು ಇನ್ನೊಬ್ಬರ ಬಳಿ ಬೇಡುವಂತಿರಬಾರದು.‌ ಅವರು ಸಮುದ್ರಕ್ಕೆ ತೆರಳಿದ ಅಲ್ಲಿ ಅವಘಡ ಸಂಭವಿಸಿದರೆ ಅವರ ರಕ್ಷಣೆಗೆ ಸೀ ಅಂಬ್ಯುಲೆನ್ಸ ವ್ಯವಸ್ಥೆ ಮಾಡಿದ್ದು ಇದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಮತ್ತು ಇದಕ್ಕಾಗಿ 700 ಕೋಟಿ ಮೀಸಲು ಇಟ್ಟಿದ್ದೇವೆ ಎಂದರು.

ನಂತರ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ ಮೀನುಗಾರರು ಒಂದು ವಿಶ್ವದ ಶಕ್ತಿ. ಅವರು ಒಳನಾಡು ಅಥವಾ ಕರಾವಳಿ ಭಾಗದ ಮೀನುಗಾರರಾಗಿರಬಹುದು. ದೇಶದ ಆಸ್ತಿಯಾಗಿ ಮೀನುಗಾರರು ಅಗ್ರಮಾನ್ಯರು. ಇನ್ನು ನಮ್ಮ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರರ ಜೀವನ ಸಾಹಸಮಯವಾಗಿದ್ದು ತುಂಬಾ ಕಷ್ಟಕರ ಜೀವನದ ಜೊತೆಗೆ ಬದುಕು ಕಟ್ಟಿಕೊಂಡಿದ್ದಾರೆ. ಅದು ಗಾಳಿ, ಮಳೆ, ಚಳಿ, ಭೂಕಂಪ ಅಥವಾ ಏನೇ ಪ್ರಕೃತಿ ವಿಕೋಪಗಳಿದ್ದರು ಸಹ ಅವರ ಕರ್ತವ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡುತ್ತಾ ಬಂದಿದ್ದಾರೆ.
ಜಾಗತಿಕ ಮಟ್ಟದಲ್ಲಿ ನಡೆದ ವಿಶ್ವ ಮೀನುಗಾರಿಕೆ ಫೆಡರೇಶನ್ ದೆಹಲಿಯಲ್ಲಿ ಮೀನುಗಾರರಿಗೆ ಅವರ ಕಾರ್ಯಕ್ಕೆ ಅಭೂತಪೂರ್ವ ಗೌರವ ಲಭಿಸಿದೆ. ಜಾಗತಿಕವಾಗಿ ಮೀನುಗಾರರ ಸಮಾಜ ಮುಂದೆ ಬರಬೇಕಿದೆ ಎಂದರು.

ಇನ್ನು ಜಿಲ್ಲೆಯ ಕುಣಿಬಿ ಸೇರಿದಂತೆ ಇನ್ನೆರಡು ಜಾತಿಯನ್ನು ಕೇಂದ್ರ ಸರಕಾರವು ಪರಿಶಿಷ್ಟ ಜಾತಿ ಮಾನ್ಯತೆ ನೀಡುವಂತೆ ಮಾಡಬೇಕು ಎಂಬುದು ನಮ್ಮ‌ ಸರಕಾರದ ಸಚಿವರಾದಿಯಾಗಿ ಎಲ್ಲರ ಒತ್ತಾಯವಾಗಿದೆ. ಇತ್ತೀಚಿನ ದಿನದಲ್ಲಿ ನಮ್ಮ ಮೀನುಗಾರರು ಮೀನುಗಾರಿಕೆಗೆ ಗೋವಾ, ಮಹಾರಾಷ್ಟ್ರ ಭಾಗಕ್ಕೆ ಹೋದಲ್ಲಿ ಅಲ್ಲಿನ ಸರಕಾರಗಳು ನಮ್ಮ ಮೀನುಗಾರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಲಿವೆ. ಅಲ್ಲಿನ ಸರಕಾರದ ಕ್ರಮ ಸರಿಯಲ್ಲ.‌ ನಮ್ಮ ಮೀನುಗಾರರಿಗೆ ಅಲ್ಲಿನ ಸರಕಾರದಿಂದ ಸಮಸ್ಯೆಯಾಗದಂತೆ ನಮ್ಮ ಸರಕಾರ ಕ್ರಮ ವಹಿಸಬೇಕಾಗಿದೆ. ಇದು ನಮ್ಮ ಒತ್ತಾಯವಾಗಿದೆ. ಮತ್ತು ಅಲ್ಲಿನ ಮೀನುಗಾರರು ಅವರ ಗಡಿಯನ್ನು ಮೀರಿ ಇಲ್ಲಿಗೆ ಮೀನುಗಾರಿಕೆ ಬರುತ್ತಲಿದ್ದು ನಮ್ಮ ಸರಕಾರ ಅಲ್ಲಿನ ಮೀನುಗಾರರಿಗೆ ಯಾವುದೇ ಸಮಸ್ಯೆ ಮಾಡುತ್ತಿಲ್ಲ. ಇದನ್ನು ಅಲ್ಲಿನ ಸರಕಾರಕ್ಕೆ ಮನವರಿಕೆ ಮಾಡಬೇಕಿದೆ ಎಂದರು

ಈ ಸಂದರ್ಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಶಾಸಕ ಶಿವರಾಮ ಹೆಬ್ಬಾರ, ಶಾಸಕ ಸತೀಶ ಸೈಲ್, ಗಣಪತಿ ಉಳ್ವೇಕರ, ತಿಪ್ಪಣ್ಣ, ಯಶಪಾಲ್ ಸುವರ್ಣ, ರಾಜು ನಾಯ್ಕ, ಸಾಯಿ ಗಾಂವಕರ್, ಸತೀಶ ನಾಯ್ಕ, ಮಾಲಾ ನಾರಾಯಣ, ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ ಉಪಸ್ಥಿತರಿದ್ದರು.

ಸೆಲ್ಫಿ ಕ್ಲಿಕ್ಕಿಸಿದ ಡಿಕೆಶಿ:

ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆಯಾಗಿ ಕೊಟ್ಟ ಇಡಗುಂಜಿ ಮಹಾಗಣಪತಿಯ ಪ್ರತಿಮೆ ಜೊತೆ ಡಿ.ಕೆ.ಶಿವಕುಮಾರ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದು ಎಲ್ಲರನ್ನು ಆಕರ್ಷಿಸಿತು.

Share This
300x250 AD
300x250 AD
300x250 AD
Back to top