ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ನಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ನವೆಂಬರ್ ತಿಂಗಳ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಭಾಜನಾರದ ಶಿರಸಿ ತಾಲ್ಲೂಕಿನ ಇಟಗುಳಿ ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮೀ ಬಿ. ರವರಿಗೆ ಗುರುವಾರ ಕಾರವಾರದ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಪ್ರಶಸ್ತಿ ಪತ್ರ ನೀಡಿ, ಅಭಿನಂದಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಯಲಕ್ಷ್ಮೀ ಬಿ. ಅವರು, ಗ್ರಾಮ ಮಟ್ಟದಲ್ಲಿ ಸಮಸ್ಯೆಗಳ ನಿವಾರಣೆ ಹಾಗೂ ಜನರ ಜೀವನ ಸುಧಾರಣೆಗಾಗಿ ನಿರಂತರ ಶ್ರಮಿಸುವ ಪಿಡಿಒ ಗಳ ಕಾರ್ಯವನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮೇಲಾಧಿಕಾರಿಗಳು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಅತ್ಯಂತ ಖುಷಿಯ ಜೊತೆಗೆ ಪ್ರಶಂಸನೀಯ ಸಂಗತಿಯಾಗಿದೆ ಎಂದರು.
ಈ ತರಹದ ಪುರಸ್ಕಾರಗಳಿಂದ ಗ್ರಾಮೀಣ ಜನರಿಗೆ ಸರಕಾರದ ವಿವಿಧ ಯೋಜನೆಗಳ ಸಿಗುವಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರೇರಣೆ ಸಿಕ್ಕಂತಾಗಿದೆ. ವಿಕೇಂದ್ರೀಕರಣ ವ್ಯವಸ್ಥೆಯಡಿ ಸ್ಥಾಪಿತವಾದ ಗ್ರಾಮ ಪಂಚಾಯತ್ ಗ್ರಾಮೀಣ ಜನರಿಗೆ ಅತೀ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತ ಮಹತ್ತರ ಪಾತ್ರವಹಿಸುತ್ತಿದೆ. ಇಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನ, ಚುನಾಯಿತ ಜನಪ್ರತಿನಿಧಿಗಳ ಸಹಕಾರ, ಸಿಬ್ಬಂದಿ ವರ್ಗದವರ ಕಾರ್ಯ ನಿರ್ವಹಣೆಯಿಂದ ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದ್ದು, ಸಹಕರಿಸಿದ ಹಾಗೂ ಪ್ರಶಸ್ತಿಗೆ ಪರಿಗಣಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ತಿಳಿಸಿದರು.
ಜಯಲಕ್ಷ್ಮೀ ಬಿ. ಅವರು ಬಿಇ ಪದವಿದರರಾಗಿದ್ದು, 2018ರಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರು ಈ ಹಿಂದೆ ಬದನಗೋಡ, ಸುಗಾವಿ ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಇಟಗುಳಿ ಗ್ರಾಮ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ನ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ ಸೇರಿದಂತೆ ಇತರರು ಉಪಸ್ಥಿತರಿದ್ದರು.