ಶಿರಸಿ: ನಾಳೆ ಬೆಳಿಗ್ಗೆ ೧೦ ಗಂಟೆಗೆ ಸ್ವಾದಿ ಜೈನಮಠದಲ್ಲಿ ಸ್ವರ್ಣವಲ್ಲೀ ಮತ್ತು ಜೈನಮಠಗಳ ಸ್ವಾಮಿಗಳ ದಿವ್ಯ ಸಾನ್ನಿಧ್ಯ ಮತ್ತು ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಏಳನೇ ವರ್ಷದ ಸೋಂದಾ ಇತಿಹಾಸೋತ್ಸವ ಉದ್ಘಾಟನೆಗೊಳ್ಳಲಿದೆ. ವಿಶೇಷವಾಗಿ ಈ ಸಂದರ್ಭದಲ್ಲಿ ಕಾರವಾರದಿಂದ ಸೋದೆ ಅರಸರ ಸೈನ್ಯದಲ್ಲಿ ದಂಡನಾಯಕನಾಗಿ ಸೇವೆ ಸಲ್ಲಿಸಿ ಸೋದೆ ಅರಸುಮನೆತನ ಪತನವಾದಮೇಲೆ ಪುನಃ ಈ ಮನೆತನದ ಏಳ್ಗೆಗೆ ಈ ಪ್ರದೇಶದ ಏಳ್ಗೆಗೆ ಶ್ರಮಿಸಿದ್ದ, ವೀರ ಸೇನಾನಿ ಹೆಂಜೆನಾಯಕನ ವಂಶಸ್ಥರ ನೇತೃತ್ವದಲ್ಲಿ ಕಾರವಾರದ ಕೋಡಿಭಾಗದಲ್ಲಿರುವ ಹೆಂಜೆ ನಾಯಕನ ಸಮಾಧಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಒಂದು ದೀಪ ಮೆರವಣಿಗೆಯಲ್ಲಿ ಸೋದೆಗೆ ಬರಲಿದೆ. ಹಾಗೆಯೇ ಸೋದೆಯ ರಾಜಕುಮಾರಿ ಮಲ್ಲಮ್ಮಳ ಹೆಸರಿನ ದೀಪ ಬೈಲಹೊಂಗಲ ತಾಲೂಕಿನ ಬೆಳವಡಿಯಿಂದ ಸೋದೆಗೆ ಬರಲಿದೆ. ನಂತರ ಸೋದೆಯ ಗ್ರಾಮ ಪಂಚಾಯತಿ ಮತ್ತು ಸೋದೆ ಸದಾಶಿವ ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಸದಾಶಿವ ದೇವಸ್ಥಾನದಿಂದಲೂ ಒಂದು ಜ್ಯೋತಿ ಬರಲಿದ್ದು ನಂತರ ಈ ಜ್ಯೋತಿಗಳಿಂದಲೇ ಈ ವರ್ಷದ ಸೋಂದಾ ಇತಿಹಾಸೋತ್ಸವ ಉದ್ಘಾಟನೆಗೊಳ್ಳಲಿದೆ.