ಸಿದ್ದಾಪುರ: ಇತ್ತೀಚೆಗೆ ಗ್ರಾಮ ಸಭೆಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರಾಗುತ್ತಿರುವುದು ಗಮನಕ್ಕೆ ಬಂದಿದ್ದು ಈ ರೀತಿ ಮುಂದುವರೆದರೆ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಆಡಳಿತಾಧಿಕಾರಿ ಬಸವರಾಜ್ ಪಿ.ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಅವರು ಮಾತನಾಡಿದರು.
ಕೃಷಿ ಅಧಿಕಾರಿ ಪ್ರಶಾಂತ್ ಜಿ.ಎಸ್. ಮಾತನಾಡಿ, ತಾಲ್ಲೂಕಿನಲ್ಲಿ ಅ. 9 ರವರೆಗೆ 4,515 ಮಿ.ಮೀ. ಮಳೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 57 ಹೆಚ್ಚು ಮಳೆಯಾದಂತಾಗಿದೆ. ಇದರ ಪರಿಣಾಮ ಕಂದು ಬಣ್ಣದ ಗೆಜ್ಜೆ ಹುಳಿಗಳು ಗದ್ದೆಗಳಿಗೆ ಹಾನಿ ಉಂಟು ಮಾಡುತ್ತಿದ್ದು, ರೈತರು ಗೊಂದಲಕ್ಕೀಡಾಗಿದ್ದಾರೆ ಎಂದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅರುಣ ಮಾತನಾಡಿ ತಾಲೂಕಿನಲ್ಲಿ 2100 ಹೆಕ್ಟರ್ ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ಬಾಧಿಸಿದೆ. 2600 ಹೆಕ್ಟರ್ ಪ್ರದೇಶಕ್ಕೆ ಕೊಳೆ ರೋಗ ವ್ಯಾಪಸಿದೆ. ಇದರಿಂದ ಅಡಿಕೆ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ. ಎಲೆಚುಕ್ಕಿ ನಿಯಂತ್ರಣಕ್ಕೆ ಹಲವು ಪ್ರದೇಶಗಳಲ್ಲಿ ಮಾಹಿತಿ ಕಾರ್ಯಾಗಾರಗಳನ್ನು ಏರ್ಪಡಿಸಿ ರೈತರಿಗೆ ಮಾಹಿತಿ ನೀಡಲಾಗಿದೆ. ಹನಿ ನೀರಾವರಿಗೆ ಸಾಮಾನ್ಯ ವರ್ಗದವರಿಗೂ ಶೇ. 90ರಷ್ಟು ಸಹಾಯಧನ ಇದ್ದು ರೈತರು ಅದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಪಶುವೈದ್ಯಾಧಿಕಾರಿ ವಿವೇಕಾನಂದ ಹೆಗಡೆ ಮಾತನಾಡಿ ಸಪ್ಟೆಂಬರ್ ತಿಂಗಳಿನಲ್ಲಿ ರೇಬಿಸ್ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಲಸಿಕಾ ಅಭಿಯಾನವನ್ನು ನಡೆಸಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಿದ್ದೇವೆ. ಮಕ್ಕಳಲ್ಲಿ ರೇಬಿಸ್ ರೋಗದ ಜಾಗೃತಿ ಮೂಡಿಸಲು ಎಲ್ಲಾ ಶಾಲೆಗಳಿಗೆ ಹೋಗಿ ಮಾಹಿತಿ ನೀಡಲಾಗಿದೆ ಎಂದರು.
ಪಟ್ಟಣ ಪ್ರದೇಶಗಳಲ್ಲಿ ಮತ್ತು ಗ್ರಾಮಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಅನುದಾನ ಮೀಸಲಿಟ್ಟು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಅಧಿಕಾರಿ ಬಸವರಾಜ್ ಸಲಹೆ ನೀಡಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಹಿತ್ತಲಕೊಪ್ಪ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.