ಸಿದ್ದಾಪುರ: ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಳೆದ 19ವರ್ಷಗಳಿಂದ ವಿವಿಧ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಜನರಲ್ಲಿ ಜಾಗೃತಿಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಗಿರೀಶ ಜಿ.ಪಿ.ಹೇಳಿದರು.
ಪಟ್ಟಣದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಯೋಜನೆಗಳು ಜಾರಿಗೊಳಿಸಲಾಗುತ್ತಿದೆ. ತಾಲೂಕಿನ 2228 ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳಿದ್ದು 14347 ಸದಸ್ಯರು ತಮ್ಮನ್ನು ಇದಲ್ಲಿ ತೊಡಗಿಸಿಕೊಂಡಿದ್ದಾರೆ. 68 ಒಕ್ಕೂಟಗಳು ಕರ್ಯನಿರ್ವಹಿಸುತ್ತಿದೆ. ಸಂಘದ ಸದಸ್ಯರುಗಳಿಗಾಗಿ ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ 77ಸದಸ್ಯರಿಗೆ 8.82ಲಕ್ಷ, ಆರೋಗ್ಯ ರಕ್ಷಾ ಯೋಜನೆಯಲ್ಲಿ 111ಸದಸ್ಯರಿಗೆ 8.13ಲಕ್ಷ ಹಾಗೂ ಪ್ರಗತಿ ರಕ್ಷಾ ಕವಚದಡಿಯಲ್ಲಿ 372 ಸದಸ್ಯರಿಗೆ 2.36ಲಕ್ಷ ವಿನಿಯೋಗಿಸಲಾಗಿದೆ. 28 ಸದಸ್ಯರಿಗೆ 5.80ಲಕ್ಷ ರೂ.ಗಳಷ್ಟು ಕ್ರಿಟಿಕಲ್ ಫಂಡ್ ನೀಡಲಾಗಿದೆ. 13 ಲಕ್ಷದ 6 ಸಾವಿರ ರೂ.ಗಳಷ್ಟು ಹಣವನ್ನು ಪ್ರತಿ ತಿಂಗಳು 136 ಕುಟುಂಬಗಳಿಗೆ ಮಾಶಾಸನ ನೀಡಲಾಗುತ್ತಿದೆ. ಜನಮಂಗಲ ಕಾರ್ಯಕ್ರಮದಲ್ಲಿ 131 ವಿಶೇಷ ಚೇತನ ಫಲಾನುಭವಿಗಳಿಗೆ ಸಹಾಯ ನೀಡಲಾಗುತ್ತಿದೆ. ಜ್ಞಾನ ದೀಪ ಯೋಜನೆಯಲ್ಲಿ ತಾಲೂಕಿನಲ್ಲಿ 26 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 146 ವಿದ್ಯಾರ್ಥಿಗಳಿಗೆ ಈ ವರ್ಷ ಸುಜ್ಞಾನ ನಿಧಿ ವಿತರಿಸಲಾಗಿದೆ.ಪ್ರಾಕೃತಿಕ ವಿಕೋಪದ ಅಡಿಯಲ್ಲಿ 1ಲಕ್ಷದ 30ಸಾವಿರ ಹಣ ನೀಡಲಾಗಿದೆ.ನಮ್ಮ ಊರು-ನಮ್ಮ ಕೆರೆ ಯೋಜನೆಯಲ್ಲಿ ತಾಲೂಕಿನಲ್ಲಿ ಎರಡು ಕೆರೆಯನ್ನು ಸ್ಥಳೀಯರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. 21 ದೇವಸ್ಥಾನಗಳಿಗೆ ಗ್ರಾಮ ಕಲ್ಯಾಣ ಯೋಜನೆಯಲ್ಲಿ 41.25ಲಕ್ಷ ನೀಡಲಾಗಿದೆ. 115 ಜನರು ಶೌರ್ಯ ವಿಪತ್ತು ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 84ಕೃಷಿ ಕಾರ್ಯಕ್ರಮಗಳನ್ನು, 60ಮಹಿಳಾ ಜ್ಞಾನವಿಕಾಸ, 18ಜನಜಾಗೃತಿ ವೇದಿಕೆ ಕಾರ್ಯಕ್ರಮ ನಡೆಸಲಾಗಿದ್ದು ತಾಲೂಕಿನಲ್ಲಿ 31ಸಿಎಸ್‌ಸಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಸ್ಮಾಲ್ ಸ್ಕೇಲ್ ಇಂಡಸ್ಟ್ರಿಗೂ ಸಂಘದ ಸದಸ್ಯರುಗಳಿಗೆ ಆರ್ಥಿಕ ಸಹಕಾರ ನೀಡಲಾಗುತ್ತಿದೆ ಎಂದು ಹೇಳಿದರು.
ಬೃಹತ್ ಜಾಥಾ ಹಾಗೂ ಸಮಾವೇಶ: ಅಕ್ಟೋಬರ್ 15ರಂದು ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ನಡೆಯಲಿದೆ.ಬೆಳಗ್ಗೆ 9ಕ್ಕೆ ನೆಹರು ಮೈದಾನದಿಂದ ಜನಜಾಗೃತಿ ಜಾಥಾ ಆರಂಭಗೊಳ್ಳಲಿದೆ. ನಂತರ ಶೃಂಗೇರಿ ಶಂಕರಮಠದ ಸಭಾಂಗಣದಲ್ಲಿ 11ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ತಹಸೀಲ್ದಾರ ಎಂ.ಆರ್.ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಸುಭಾಷ ನಾಯ್ಕ ಅಧ್ಯಕ್ಷತೆವಹಿಸುವರು. ಉಪನ್ಯಾಸಕ ರಾಮು ಕಿಣಿ ದಿಕ್ಸೂಚಿ ಮಾತನಾಡುವರು. ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ, ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ, ಸಿಪಿಐ ಕುಮಾರ ಕೆ, ಬಿಇಒ ಎಂ.ಎಚ್.ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಳಿಂಗರಾಜು, ಉಪಾಧ್ಯಕ್ಷೆ ಗೌರಿ ನಾಯ್ಕ ಜಿಲ್ಲಾ ಜನಜಾಗೃತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ವಿವೇಕ್ ರಾಯ್ಕರ್ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಉಪಸ್ಥಿತಿರುತ್ತಾರೆ ಎಂದು ಹೇಳಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಮೇಶ ಹೆಗಡೆ ಹಾರ್ಸಿಮನೆ, ಕೃಷಿ ಮೇಲ್ವಿಚಾರಕ ಮಹಾದೇವ ಬಿ, ಲೆಕ್ಕಪತ್ರ ಅಧಿಕಾರಿ ಅನಂದ ಉಪಸ್ಥಿತರಿದ್ದರು.