ಕಾರವಾರ: ಪ್ರತಿಯೊಬ್ಬರೂ ದೈಹಿಕ ಆನಾರೋಗ್ಯದ ಸಮಸ್ಯೆಗೆ ಚಿಕಿತ್ಸೆ ಪಡೆದಂತೆ ಮಾನಸಿಕ ಆನಾರೋಗ್ಯಕ್ಕೂ ಚಿಕಿತ್ಸೆ ಪಡೆಯಬೇಕು. ಅರೋಗ್ಯಕರ ಜೀವನ ಸಾಗಿಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಬಹಳ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯದೀಶೆ ರೇಷ್ಮಾ ಜಿ. ರೋಡ್ರಿಗಸ್ ಹೇಳಿದರು.
ಅವರು ಬುಧವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಅರೋಗ್ಯ ಮತ್ತು ಕು.ಕ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರಕ್ಷಕ, ಶಿಕ್ಷಣ, ಕಾರಾಗೃಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಅರೋಗ್ಯ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮತ್ತು ಕು. ಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೆಲಸದ ಒತ್ತಡ, ಚಿಂತೆ, ಸಮಸ್ಯೆ ಇದೆಲ್ಲವೂ ಎಲ್ಲರಿಗೂ ಇರುತ್ತವೆ. ಇವು ಜೀವನದ ಭಾಗಗಳಾಗಿವೆ. ಹಾಗಾಗಿ ಇವುಗಳನ್ನು ಸಮರ್ಪಕವಾಗಿ ನಿಭಾಯಿಸಲು ಕಲಿಯಬೇಕು. ಆತ್ಮೀಯರೊಂದಿಗೆ ಮಾತನಾಡುವುದು ಹಸಿರು ವಾತಾವರಣದಲ್ಲಿ ಕಾಲ ಕಳೆಯುವುದು, ಆಳವಾದ ಉಸಿರಾಟ, ವ್ಯಾಯಾಮ, ನಗುವುದು, ಹಾಸ್ಯ ಕಾರ್ಯಕ್ರಮಗಳ ವೀಕ್ಷಣೆ ಮಾಡಿ, ಇವುಗಳು ಒತ್ತಡ ನಿಭಾಯಿಸುವಲ್ಲಿ ಸಹಾಯಕವಾಗಲಿವೆ ಎಂದರು.
ಕೆಲಸದ ಒತ್ತಡದ ಸಮಯದಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯವಾಗಿದೆ, ಮಾನಸಿಕ ಆರೋಗ್ಯಕ್ಕ ರಾತ್ರಿ ಆಳವಾದ ನಿದ್ದೆ, ಉತ್ತಮ ಊಟ, ಸಮತೋಲಿತ ಆಹಾರ ಸೇವಿಸಿ, ಯೋಗ, ವ್ಯಾಯಾಮ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ರೋಗಗಳಿಂದ ದೂರವಿರಬಹುದು ಎಂದರು.
ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಜಯಕುಮಾರ ಮಾತನಾಡಿ, ಮಾನಸಿಕ ರೋಗಕ್ಕೆ ಒಳಗಾದವರನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸಿ, ಗುಣಮುಖರಾಗಿ ಮಾಡಲು ಸಾಧ್ಯವಾಗುತ್ತದೆ. ಮಾನಸಿಕ ಕಾಯಿಲೆ, ಖಿನ್ನತೆ, ಇತರೆ ತೊಂದರೆಗಳು ಇದ್ದಲ್ಲಿ ಮುಕ್ತವಾಗಿ ಮಾತನಾಡಿ ಚಿಕಿತ್ಸೆ ಪಡೆದುಕೊಳ್ಳಿ, ಯುವ ಜನತೆ ಮೊಬೈಲ್ ಬಳಕೆ ಮಾಡುವುದು ಹೆಚ್ಚಾಗಿದೆ ಇದರಿಂದ ದೂರವಿದ್ದು, ಉತ್ತಮ ಪುಸ್ತಕಗಳು ಓದುವ ಹವ್ಯಾಸ ಬೆಳಸಿಕೊಳ್ಳುವುದರ ಮೂಲಕ ಸಧೃಡವಾದ ಸಮಾಜವನ್ನು ನಿರ್ಮಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನೀರಜ್ ಬಿ.ವಿ ಮಾತನಾಡಿ, ಈ ಕಾರ್ಯಕ್ರಮ ಒಂದು ದಿನಕ್ಕೆ ಸಮೀತವಾಗದೆÀ ನಿರಂತರವಾಗಿ ಮಾನಸಿಕ ಆರೋಗ್ಯದ ಬಗ್ಗೆ ಎಲ್ಲರೂ ಜಾಗೃತಿ ಮೂಡಿಸಬೇಕು, ತಮ್ಮ ಸಹಪಾಠಿ, ಕುಟುಂಬದವರಲ್ಲಿ ಮಾನಸಿಕ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಚಿಕಿತ್ಸೆ ಒಳಪಡಿಸಬೇಕು, ಮಾನಸಿಕ ಅನಾರೋಗ್ಯಕ್ಕೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಸುಹಾಸ್ ಮಾನಸಿಕ ಆರೋಗ್ಯದ ಗುಣಲಕ್ಷಣ, ಉದ್ದೇಶ, ಗುರಿ, ಪರಿಹಾರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ. ಶಂಕರ ರಾವ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ, ಮಾನಸಿಕ ಆರೋಗ್ಯ ವಿಭಾಗದ ಮನೋರೋಗ ತಜ್ಞವೈದ್ಯ ಡಾ. ಅಕ್ಷಯ ಪಾಟಕ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಶಿವಾನಂದ ನಾಯಕ, ಯೋಗ ಶಿಕ್ಷಕಿ ಪ್ರೇಮಾ ನಾಯ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.