ಮುಂಡಗೋಡ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ವ್ಯಾಪಾರ–ವಹಿವಾಟು, ಸೇವೆಗಳು, ಚರ ಮತ್ತು ಸ್ಥಿರ ಆಸ್ತಿಗಳ ಮೇಲೆ ವಿಧಿಸುವ ಶುಲ್ಕ ಹಾಗೂ ಕರವನ್ನು ಸಮರ್ಪಕವಾಗಿ ಸಂಗ್ರಹಿಸುವ ಮತ್ತು ಶ್ರಮವಹಿಸಿ ಅತಿಹೆಚ್ಚು ಶೇಕಡಾವಾರು ತೆರಿಗೆ ವಸೂಲಿ ಮಾಡುವ ಕರ ವಸೂಲಿಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ ಅವರು ವಿನೂತನ ಪ್ರಯತ್ನವಾಗಿ “ಸ್ಟಾರ್ ಪರ್ಫಾರ್ಮರ್ ಆಫ್ ದಿ ವೀಕ್” ಎಂಬ ಪ್ರಶಸ್ತಿ ನೀಡಿ, ಪ್ರೋತ್ಸಾಹಿಸುವ ಕಾರ್ಯವನ್ನು ಆರಂಭಿಸಿದ್ದಾರೆ.
ನಂದಿಕಟ್ಟಾ ಗ್ರಾಮ ಪಂಚಾಯತಿಯ ಕರ ವಸೂಲಿಗಾರ ವೀರಭದ್ರ ಸಂಗಯ್ಯ ಹೊಸಮನಿ ಅವರು ಸೆಪ್ಟೆಂಬರ್ ಕೊನೆಯ ವಾರದ ಅವಧಿಯಲ್ಲಿ ರೂ. 2.40 ಲಕ್ಷಕ್ಕೂ ಅಧಿಕ ಮತ್ತು ಒಂದೇ ದಿನದಲ್ಲಿ ರೂ. 1.44 ಲಕ್ಷಕ್ಕೂ ಅಧಿಕ ತೆರಿಗೆ ಸಂಗ್ರಹಿಸುವ ಮೂಲಕ “ಸ್ಟಾರ್ ಪರ್ಫಾರ್ಮರ್ ಆಫ್ ದಿ ವೀಕ್” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಮುಂಡಗೋಡಿನಲ್ಲಿ ನಡೆದ ಸಂಪೂರ್ಣತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ಮೊದಲ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ವೀರಭದ್ರ ಹೊಸಮನಿ ಅವರಿಗೆ ನೀಡಿ, ಅಭಿನಂದಿಸಿದರು.
ನಂತರ ಮಾತನಾಡಿದ ಅವರು, ಗ್ರಾಮ ಪಂಚಾಯತಗಳ ಸಂಪನ್ಮೂಲ ಕ್ರೋಢಿಕರಣದಲ್ಲಿ ಕರ ವಸೂಲಿಗಾರರ ಪಾತ್ರ ಮಹತ್ವದ್ದಾಗಿದೆ. ಅವರ ಪ್ರಾಮಾಣಿಕ ಪ್ರಯತ್ನ ಮತ್ತು ಕಾರ್ಯಕ್ಷಮತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಇವರಂತೆ ಉಳಿದೆಲ್ಲ ಕರ ವಸೂಲಿಗಾರರು ಹೆಚ್ಚೆಚ್ಚು ತೆರಿಗೆ ಸಂಗ್ರಹಿಸುವ ಮೂಲಕ ಮಾದರಿಯಾಗಬೇಕು ಎಂದರು.
ಇಓ ದಾಸನಕೊಪ್ಪ ಮಾತನಾಡಿ, ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡಮಾಡುವ ಪಿಡಿಓ ಆಫ್ ದಿ ಮಂತ್ ಪ್ರಶಸ್ತಿ ಮಾದರಿಯಲ್ಲಿ ತಾಲೂಕಿನ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಕರ ವಸೂಲಿಗಾರರನ್ನು ಪ್ರೋತ್ಸಾಹಿಸಲು ನೂತನವಾಗಿ ‘ಸ್ಟಾರ್ ಪರ್ಫಾರ್ಮರ್ ಆಫ್ ದಿ ವೀಕ್’ ಪ್ರಶಸ್ತಿಯನ್ನು ಜಾರಿಗೆ ತರಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್, ಸಹಾಯಕ ನಿರ್ದೇಶಕ (ಗ್ರಾಉ) ಸೋಮಲಿಂಗಪ್ಪ ಛಬ್ಬಿ, ತಾಲೂಕಿನ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.