ಯಲ್ಲಾಪುರ: ಶಿಕ್ಷಣದೊಂದಿಗೆ ಸಂಸ್ಕಾರ ಮುಖ್ಯ. ಶಾಲೆಯಲ್ಲಿ ನೀಡುವ ಸಂಸ್ಕಾರ ನಮ್ಮ ಆಸ್ತಿಯಾಗಿರುತ್ತದೆ ಎಂದು ತಾಲೂಕು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಹೇಳಿದರು.
ಅವರು ತಾಲೂಕಿನ ಭರತನಹಳ್ಳಿಯ ಪ್ರಗತಿ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ದಿ.ದಿನಕರ ದೇಸಾಯಿ ಜನ್ಮದಿನದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಚುಟುಕು ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮಾತೃಭಾಷೆಯನ್ನು ಮನೆಯಲ್ಲಿ ಮಾತನಾಡಿದರೂ, ಕನ್ನಡ ಭಾಷೆಯನ್ನೂ ತಾಯಿಯಂತೆ ಗೌರವಿಸಬೇಕು ಎಂದರು.
ಸಾಹಿತಿ ಗ.ರಾ. ಭಟ್ಟ ಮಾತನಾಡಿ, ದಿನಕರ ದೇಸಾಯಿಯವರು ತಮ್ಮ ಚುಟುಕಿನಿಂದಲೇ ಸಮಾಜದ ಎಲ್ಲಾ ಜನರನ್ನೂ ಆಕರ್ಷಿಸಿದರು. ಜೀವನದಲ್ಲಿ ಎಂದೂ ಅಹಂಕಾರವಿರಬಾರದು. ಅಹಂಕಾರಿಯನ್ನು ಸಮಾಜ ತಿರಸ್ಕರಿಸಿದರೆ ನಿರಹಂಕಾರಿಯನ್ನು ಗೌರವಿಸುತ್ತದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತರಾದರೆ ಗೌರವಯುತವಾಗಿ ಬೆಳೆಯಲು ಸಾಧ್ಯ ಎಂದರು.
ಮುಖ್ಯಾಧ್ಯಾಪಕ ವಿನಾಯಕ ಹೆಗಡೆ ಮಾತನಾಡಿದರು. ಚುಟುಕು ರಚನಾ ಸ್ಪರ್ಧೆಯಲ್ಲಿ ಕಾರ್ತೀಕ ಪೂಜಾರಿ ಪ್ರಥಮ, ಅಪೇಕ್ಷಾ ಶೇಟ್ ದ್ವಿತೀಯ, ಮಧುರಾ ನಾಯ್ಕ ತೃತೀಯ ಬಹುಮಾನ ಪಡೆದರು.
ಶಿಕ್ಷಕ ಚಂದ್ರಪ್ಪ ವಂಟಮುರಿ ಸ್ವಾಗತಿಸಿದರು. ಧನ್ಯಾ ಹೆಗಡೆ ದಿನಕರ ದೇಸಾಯಿಯವರ ಬದುಕು ಬರಹ ಕುರಿತು ಮಾತನಾಡಿದರು. ಆದಿತ್ಯಶಂಕರ ನಿರ್ವಹಿಸಿದರು. ಪ್ರಕಾಶ ಭಟ್ಟ ವಂದಿಸಿದರು.