ಪ್ರಗತಿಯ ಹಾದಿಯಲ್ಲಿ ಡಿಸಿಸಿ ಬ್ಯಾಂಕ್ ದಾಪುಗಾಲು | ರೈತರಿಗೆ ಶಿಕ್ಷಣ, ವಾಹನ, ಫಾರ್ಮ್ ಹೌಸ್ ಸೇರಿದಂತೆ ಸಾಲದ ವ್ಯವಸ್ಥೆ
ಶಿರಸಿ: ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ 104ವರ್ಷ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದು 2023-24ನೇ ಸಾಲಿನಲ್ಲಿ ಬ್ಯಾಂಕ್ ಇತಿಹಾಸದಲ್ಲಿಯೇ ರೂ.23 ಕೋಟಿಯಷ್ಟು ದಾಖಲೆಯ ಲಾಭ ಮಾಡಿದೆ ಎಂದು ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದರು.
ಅವರು ಶಿರಸಿ ನಗರದ ನಗರದ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬ್ಯಾಂಕ್‌ನ ಶೇರು ಬಂಡವಾಳ 131ಕೋಟಿ ರೂ.,ನಿಧಿ 324ಕೋಟಿ ರೂ., ಠೇವು 3030ಕೋಟಿ ರೂ.,ಗಳಾಗಿದೆ. ಒಟ್ಟು 392ಕೋಟಿ ರೂ. ಆದಾಯ ಬಂದಿದ್ದು ನಿವ್ವಳ ಲಾಭ 23.04ಕೋಟಿ ರೂ.ಲಾಭ ಗಳಿಸಿದೆ. ವಸೂಲಾತಿ ಆಗದ ಸಾಲದ ಪ್ರಮಾಣ ಎನ್‌ಪಿಎ ಶೇ.2.01 ಆಗಿದ್ದು ಇದು ಬ್ಯಾಂಕಿಂಗ್ ಆರೋಗ್ಯವನ್ನು ತಿಳಿಸುತ್ತದೆ. ಬ್ಯಾಂಕ್ ಠೇವಣಿದಾರರ ಹಾಗೂ ಸಾಲಗಾರರ ಎರಡೂ ಹಿತ ಗಮನಿಸಿ ವ್ಯವಹರಿಸುವ ಸವಾಲಿದೆ ಎಂದರು.
ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಪ್ರೋತ್ಸಾಹಿಸುವ ಸಂಬಂಧ ಶಿಕ್ಷಣ ಸಾಲವನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಸರಕಾರ ಜಾರಿಗೆ ತಂದಿದೆ. 38 ವಿದ್ಯಾರ್ಥಿಗಳಿಗೆ 4.55 ಕೋಟಿ ರೂ., ಸಾಲ ವಿತರಿಸಲಾಗಿದೆ ಎಂದರು.
ಬ್ಯಾಂಕ್‌ನಿಂದ 3097ಕೋಟಿಯಷ್ಟು ಸಾಲ ಬಾಕಿಯಿದೆ. ಅದರಲ್ಲಿ ಕೃಷಿಗಾಗಿ ಕೊಟ್ಟ 1340ಕೋಟಿ ರೂ.ಸಾಲವೇ ಇದೆ. ಜಿಲ್ಲೆಯ 1.10 ಲಕ್ಷ ರೈತರಲ್ಲಿ 10 ಲಕ್ಷ ರೈತರನ್ನು ಹೊರತುಪಡಿಸಿ ಇನ್ನುಳಿದ 1ಲಕ್ಷ ರೈತರು ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ ಎಂದರು. ಬ್ಯಾಂಕ್ ವ್ಯಕ್ತಿಗಳಿಗೆ ನೇರವಾಗಿ ಫಾರ್ಮ್ ಹೌಸ್ ಸಾಲ ನೀಡುತ್ತಿದ್ದು 30 ಲಕ್ಷ ರೂ.ವರೆಗೆ ಸಾಲ ನೀಡುತ್ತಿದೆ. ಕಳೆದ ಸಾಲಿನಲ್ಲಿ 195 ಜನರಿಗೆ 43.31ಕೊಟಿ ರೂ.ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಮೋಹನದಾಸ್ ನಾಯಕ, ಎಂಡಿ ಶ್ರೀಕಾಂತ ಭಟ್ಟ, ನಿರ್ದೇಶಕರಾದ ಎಸ್.ಎಲ್.ಘೋಟ್ನೇಕರ್, ರಾಮಕೃಷ್ಣ ಹೆಗಡೆ ಕಡವೆ, ಎಲ್.ಟಿ.ಪಾಟೀಲ್, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಸಿಎ ತಿಮ್ಮಯ್ಯ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಕೃಷಿ ಭೂಮಿ ಖರೀದಿಗೆ 20 ಕೋಟಿ ಸಾಲ..
ಜಿಲ್ಲೆಯಲ್ಲಿ ಕೃಷಿ ಉತ್ತೇಜಿಸುವ ದೃಷ್ಟಿಯಿಂದ ಅರ್ಹ ಗ್ರಾಹಕರಿಗೆ ಬ್ಯಾಂಕ್‌ನಿಂದ 40ಲಕ್ಷ ರೂ.ವರೆಗೆ ಶೇ.12ರ ಬಡ್ಡಿ ದರದಲ್ಲಿ 144ಮಾಸಿಕ ಕಂತಿನಲ್ಲಿ ಸಾಲ ನೀಡುತ್ತಿದ್ದೇವೆ. ಕಳೆದ ಆರ್ಥಿಕ ವರ್ಷದಲ್ಲಿ
85ಗ್ರಾಹಕರಿಗೆ 20.33ಕೋಟಿ ರೂ.ಸಾಲ ನೀಡಿದ್ದೇವೆ ಎಂದು ಅಧ್ಯಕ್ಷ ಹೆಬ್ಬಾರ ವಿವರಣೆ ನೀಡಿದರು.
ಸಕ್ಕರೆ ಕಾರ್ಖಾನೆಗಳಿಗೆ 339ಕೋಟಿ ರೂ.ಸಾಲ
ಕೆಡಿಸಿಸಿ ಬ್ಯಾಂಕ್‌ನಿAದ 26 ಸಕ್ಕರೆ ಕಾರ್ಖಾನೆಗಳಿಗೆ 339ಕೋಟಿ ರೂ.ಸಾಲ ನೀಡಲಾಗಿದೆ. ಈ ಸಾಲಕ್ಕೆ ಶೇ.14ಬಡ್ಡಿ ದರ ವಿಧಿಸಲಾಗುತ್ತದಿದೆ. ಈ ಬಾರಿ ಅದರಿಂದಲೇ 52ಕೋಟಿ ರೂ.ಬಡ್ಡಿ ಬಂದಿದೆ. ಇನ್ನು ಎರಡು ಸಕ್ಕರೆ ಕಾರ್ಖಾನೆಗಳು ಹಣ ಭರಣ ಮಾಡದೇ ಇರುವ ವಿಷಯ ಎನ್‌ಸಿಆರ್‌ಟಿ ಕೋರ್ಟ್ನಲ್ಲಿದೆ ಎಂದು ಅಧ್ಯಕ್ಷ ಶಿವರಾಮ ಹೆಬ್ಬಾರ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರಿಸಿದರು.
ಕಾರು ಸಾಲ ವಂಚನೆ: 4ಕೋಟಿ ರೂ.ವಸೂಲಿ
ಆರ್‌ಟಿಒ ಸಹಿಯಿಂದ ಹಿಡಿದು ಎಲ್ಲವನ್ನೂ ನಕಲಿ ಮಾಡಿ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 7ಕೋಟಿ ರೂ.ನಲ್ಲಿ 4ಕೋಟಿ ರೂ.ವಸೂಲಿಯಾಗಿದೆ.ಇನ್ನೂ 3ಕೋಟಿ ರೂ.ಬಾಕಿಯಿದೆ ಎಂದು ಅಧ್ಯಕ್ಷ ಶಿವರಾಮ ಹೆಬ್ಬಾರ ಮಾಹಿತಿ ನೀಡಿದರು.