ದಾಂಡೇಲಿ : ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ, ಜನಪರ ಹೋರಾಟಗಾರರೂ ಅದ ಬಿ.ಎನ್. ವಾಸರೆ ಹಾಗೂ ದಾಂಡೇಲಿಯ ಹಲವು ಪತ್ರಕರ್ತರ ಮೇಲೆ ದರ್ಪದಿಂದ ವರ್ತಿಸಿ, ಬಂಧನದ ಬೆದರಿಕೆ ಹಾಕಿದ ದಾಂಡೇಲಿಯ ಸಿ.ಪಿ.ಐ. ಭೀಮಣ್ಣ ಸೂರಿಯ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಹಾಗೂ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯ ವಿಶ್ವನಾಥ ಹುಲಸದಾರ ಕೃತ್ಯಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ವಹಿಸುವಂತೆ ಜಾಗೃತ ಕರ್ನಾಟಕ ವೇದಿಕೆಯ ಪದಾಧಿಕಾರಿಗಳು ಹಾಗೂ ನಾಡಿನ ಹಲವು ಸಾಹಿತಿಗಳು, ಸಮಾಜಮುಖಿ ಚಿಂತಕರು ಸರಕಾರಕ್ಕೆ ಹಾಗೂ ಉತ್ತರಕನ್ನಡದ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.
ಈ ಬಗ್ಗೆ ನಾಡಿನ ಚಿಂತಕರೂ ಹಾಗೂ ಬರಹಗಾರರೂ ಅದ ಡಾ. ಜಿ. ರಾಮಕೃಷ್ಣ, ಪ್ರೊ. ಕೆ. ಮರುಳಸಿದ್ಧಪ್ಪ, ಪ್ರೊ. ಎಸ್. ಜಿ., ಸಿದ್ದರಾಮಯ್ಯ, ಡಾ.ವಿಜಯಾ, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಿಮಲಾ. ಕೆ. ಎಸ್., ಡಾ.ವಸುಂಧರಾ ಭೂಪತಿ, ರೂಪಾ ಹಾಸನ, ಬಿ. ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್, ಡಾ.ಮೀನಾಕ್ಷಿ ಬಾಳಿ, ಎನ್.ಕೆ.ವಸಂತ್ ರಾಜ್, ಶಾಂತಾರಾಮ ನಾಯಕ, ಹಿಚ್ಕಡ ಮುಂತಾದವರು ಪತ್ರ ಮುಖೇನ ಶುಕ್ರವಾರ ಒತ್ತಾಯಿಸಿದ್ದಾರೆ.
ದಾಂಡೇಲಿಯ ಅಬ್ದುಲ್ ಕಲಾಮ ವಸತಿ ಶಾಲೆಯ ಪ್ರಾಂಶುಪಾಲರಾದ ವಿಶ್ವನಾಥ ಹುಲಸದಾರ ವರ್ಗಾವಣೆ, ವಸತಿ ಶಾಲೆಯಿಳಗೆ ನಡೆದಿರುವ ಅಪರಾ ತಪರಾ, ಅದರ ನಂತರವಾದ ಬೆಳವಣಿಗೆ, ಕಾಲೇಜಿಗೆ ಮರಳಿ ಬಂದ ಪ್ರಾಚಾರ್ಯ ವಿದ್ಯಾರ್ಥಿಗಳಿಗೆ ಬೆದರಿಸಿದ್ದು, ತಂದೆ ತಾಯಿಗಳ ಹೆಸರಲ್ಲಿ ನಿಂದಿಸಿದ್ದು, ಮಕ್ಕಳು ಹಠಾತ್ ಪ್ರತಿಭಟನೆ ನಡೆಸಿದ್ದೆಲ್ಲವನ್ನೂ ಪತ್ರದಲ್ಲಿ ವಿವರಿಸಿರುವ ನಾಡಿನ ಹಿರಿಯ ಸಾಹಿತಿಗಳು, ಆನಂತರದಲ್ಲಿ ಸಿ.ಪಿ.ಐ. ಭೀಮಣ್ಣ ಸೂರಿಯ ಅನುಚಿತ ನಡವಳಿಕೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಪ್ರಾಚಾರ್ಯನ ವರ್ತನೆಯಿಂದ ಬೇಸರಗೊಂಡ ವಿದ್ಯಾರ್ಥಿಗಳು ಹಠಾತ್ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ , ಜನಪರ ಹೋರಾಟಗಾರ ಬಿ.ಎನ್. ವಾಸರೆಯವರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದ ಹಿನ್ನೆಲೆಯಲ್ಲಿ ವಾಸರೆ ಪ್ರಾಚಾರ್ಯರ ಕ್ಷಮೆಯಾಚೆನೆಗೆ ಪೊಲೀಸರಲ್ಲಿ ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ಬಂದ ಸಿ.ಪಿ.ಐ. ಭೀಮಣ್ಣ ಸೂರಿಯವರು ನಡೆದ ವಿಷಯವನ್ನು ತಿಳಿದುಕೊಳ್ಳುವ ಮುನ್ನವೇ, ವಿದ್ಯಾರ್ಥಿಗಳ ಅಹವಾಲು ಆಲಿಸುವ ಮುನ್ನವೇ, ಏಕಾಏಕಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾದರೆಯವರನ್ನು ಎಳೆದಾಡಿ, ದರ್ಪ ಮೆರೆದಿದ್ದು, ಉಳಿದ ಪತ್ರಕರ್ತರಾದ ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಸಂದೇಶ ಜೈನ್, ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಖಜಾಂಚಿ ಅಕ್ಷಯಗಿರಿ ಗೋಸಾವಿ, ಅಪ್ತಾಪ ಶೇಖ್ ಅವರ ಮೇಲೆಯೂ ಏರಿ ಹೋಗಿದ್ದು ಅಮಾನವೀಯ ಸನ್ನಿವೇಶವಾಗಿದೆ. ವಿದ್ಯಾರ್ಥಿಗಳ ಪರ ನಿಂತ ಪತ್ರಕರ್ತರನ್ನೇ ಬೆದರಿಸಿ ಹಿರಿಯ ಪತ್ರಕರ್ತ, ಕಸಾಪ ಜಿಲ್ಲಾ ಅಧ್ಯಕ್ಷರೂ ಆದ ಬಿ.ಎನ್. ವಾಸರೆಯವರನ್ನು ಎಳೆದಾಡಿ ‘ವಯಕ್ತಿಕ ಹಿತಾಸಕ್ತಿಯ’ ಪದ ಬಳಸಿ ಅನುಚಿತವಾಗಿ ವರ್ತಿಸಿ, ಬಂಧನದ ಬೆದರಿಕೆ ಹಾಕಿರುವುದು ದರ್ಪದ ಪರಮಾವಧಿಯಾಗಿದೆ. ಅತ್ಯಂತ ಖಂಡನೀಯ ಎಂದಿದ್ದಾರೆ.
ಈ ಘಟನೆ ನಡೆಯುವ ಸಂದರ್ಭದಲ್ಲಿ ಸ್ವತಃ ಪೊಲೀಸ್ ಅಧಿಕಾರಿಗಳೇ ನಿಂತು ಪ್ರಾಂಶುಪಾಲರು ಪಲಾಯನ ಮಾಡಲು ಸಹಕರಿಸಿದ್ದು ಕೂಡಾ ಅವರ ನಿಲುವಿನ ಬಗ್ಗೆ ಪ್ರಶ್ನಿಸುವಂತದ್ದಾಗಿದೆ ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಾಗೃತ ಕರ್ನಾಟಕ ವೇದಿಕೆ ಒತ್ತಾಯಿಸಿದೆ.
ವಸತಿ ಶಾಲೆಯ 400 ಬಡ ವಿದ್ಯಾರ್ಥಿಗಳ ಬದುಕಿನೊಡನೆ ಚೆಲ್ಲಾಟವಾಡಿದ ಓರ್ವ ಪ್ರಾಚಾರ್ಯರ ಮೇಲೆ ಕ್ರಮ ಕೈಗೊಳ್ಳುವ ಬದಲು ಆತನನ್ನು ರಕ್ಷಿಸಲು ಪೋಲಿಸರೇ ಮುಂದಾದರೆ ದೂರುವುದು, ದೂರು ಕೊಡುವುದು ಯಾರಲ್ಲಿ ಎಂಬುದು ಪ್ರಶ್ನೆಯಾಗಿದೆ. ಈ ಘಟನೆಗೆ ಸಂಬಂಧಿಸಿ ಕಳೆದ ನಾಲ್ಕು ದಿನದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ, ದುರ್ವರ್ತನೆಯ ಪ್ರಾಚಾರ್ಯರನ್ನು ಹಾಗೂ ಪತ್ರಕರ್ತರ ಮೇಲೆ ದರ್ಪ ತೋರಿದ ಪೋಲೀಸ್ ಅಧಿಕಾರಿಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ನಾಡಿನ ಸಾಹಿತಿಗಳು ಒತ್ತಾಯಿಸಿದ್ದಾರೆ.