ಗ್ರೀನ್ ಕೇರ್ ಸಂಸ್ಥೆಯಿಂದ ಕೌಶಲ್ಯ ವಿಕಾಸ ಯೋಜನೆ ಪ್ರಾರಂಭ
ಶಿರಸಿ: ಬದುಕಿನಲ್ಲಿ ಛಲದೊಂದಿಗೆ ನಿರ್ದಿಷ್ಠ ಗುರಿ ಸಾಧಿಸಬೇಕಾದರೆ ಕೌಶಲ್ಯ ಅತ್ಯಂತ ಅವಶ್ಯ, ಕೌಶಲ್ಯ ಎಂಬುವುದು ನಿರಂತವಾಗಿ ಹೊಸತನ್ನು ಕಲಿಸುವ ಮತ್ತು ಕಲಿಯುವ ಸಾಧನ, ಅದು ನಿಂತ ನೀರಂತಾಗಲು ಬಿಡಬಾರದು, ಆ ಮೂಲಕ ಕೌಶಲ್ಯ ವೃದ್ಧಿಸಿಕೊಂಡು ಕೊರತೆಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಹೋಟೆಲ್ ಮಧುವನದಲ್ಲಿನ ಆರಾಧನ ಸಭಾಂಗಣದಲ್ಲಿ ಗ್ರೀನ್ ಕೇರ್ ಸಂಸ್ಥೆಯು ಕೌಶಲ್ಯ ವಿಕಾಸ ಯೋಜನೆಯಡಿ ಹಮ್ಮಿಕೊಂಡಿದ್ದ ನಿರುದ್ಯೋಗ ಯುವಕ ಯುವತಿಯರಿಗೆ ಉಚಿತವಾಗಿ 30 ದಿನಗಳ ಅಕೌಂಟ್ ಅಸಿಸ್ಟೆಂಟ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ನಿರಂತರ ಓದು ಹಾಗೂ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಕಾರಾತ್ಮಕತೆಯನ್ನು ಜೀವನವನ್ನು ಅಳವಡಿಸಿಕೊಳ್ಳಬೇಕು. ಅಂತಹ ಉತ್ತಮ ಕಾರ್ಯಕ್ಕೆ ಬುನಾದಿ ಹಾಕುವ ನಿಟ್ಟಿನಲ್ಲಿ ಗ್ರೀನ್ ಕೇರ್ ಸಂಸ್ಥೆಯು ಉಚಿತವಾಗಿ ಇಂತಹ ತರಬೇತಿಗಳನ್ನು ಆಯೋಜಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಗ್ರೀನ್ ಕೇರ್ ಸಂಸ್ಥೆಯು ಕಳೆದ 4 ವರ್ಷಗಳಿಂದ ಮಾಡಿರುವ ಅನೇಕ ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಿಡಿಸಿ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಮುಖ್ಯ ಅಥಿತಿ ಬೆಂಗಳೂರಿನ ಮಲ್ಟಿಕ್ಯುರ್ ಫಾರ್ಮ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾದ ಹೀರಲಾಲ್ ಶರ್ಮ ಮಾತನಾಡಿ ಕಷ್ಟಕಾಲದಲ್ಲಿ ಕಳೆದ ದಿನಗಳನ್ನು ಒಂದು ಸವಾಲು ಆಗಿ ಸ್ವೀಕರಿಸಿದರೆ ಅದು ನಮ್ಮ ಭದ್ರಭವಿಷ್ಯಕ್ಕೆ ಬುನಾದಿ ಆಗುತ್ತದೆ. ಮಲ್ಟಿಕ್ಯುರ್ ಫಾರ್ಮ ಪ್ರೈವೇಟ್ ಲಿಮಿಟೆಡ್ ಕಂಪನಿಯು ಅನೇಕ ಸಮಾಜಮುಖಿ ಕೆಲಸಕ್ಕೆ ಸಹಕಾರಿ ನೀಡುತ್ತದೆ, ಗ್ರೀನ್ ಕೇರ್ ಸಂಸ್ಥೆಯು ಮಾಡುವ ಎಲ್ಲಾ ಕೆಲಸಗಳಿಗೆ ನಮ್ಮ ಕಂಪನಿಯ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು. ಎಚ್.ಡಿ. ಎಫ್. ಸಿ. ಲೈಫ್ ನ ಹುಬ್ಬಳ್ಳಿ ವಲಯ ಮಮುಖ್ಯಸ್ಥರಾದ ರಾಜೇಶ್ ಜಿ. ಭಟ್ ಮಾತನಾಡಿ ಜಗತ್ತು ಬೆಳೆಯುತ್ತಿರುವು ವೇಗಕ್ಕೆ ನಾವು ಹೊಂದಿಕೊಳ್ಳಬೇಕಾದರೆ ಇಂದಿನ ಕಾಲಮಾನದ ಕೌಶಲ್ಯಗಳನ್ನು ಕಲಿಯುವುದು ಅವಶ್ಯವಾಗಿದೆ ಎಂದರು. ಎಂಇಎಸ್ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ.ಆರ್.ಜಿ. ಹೆಗಡೆ ಮಾತನಾಡಿ ಔಪಚಾರಿಕ ಶಿಕ್ಷಣದ ಜೊತೆಯಲ್ಲಿ ಇಂತಹ ತರಬೇತಿಗಳು ನಮ್ಮಲ್ಲಿ ವಿಶ್ವಾಸ ಮೂಡಿಸುತ್ತದೆ ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ಯಾಮಸುಂದರ ಎಸ್ ವಹಿಸಿದ್ದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿಜಯೇಂದ್ರ ಲಾಡ್ ಮತ್ತು ಸುಮೇಶ್ ಮಿರಾಶಿ, ಸ್ಟಾರ್ ಲೈಫ್ ಮ್ಯಾನೇಜರ್ ಸಂತೋಷ ಭಟ್ಕಳ, ಯಲ್ಲಾಪುರದ ಕ್ರಿಯೇಟಿವ್ ತರಬೇತಿ ಕೇಂದ್ರ ಮುಖಸ್ಥ ಶ್ರೀನಿವಾಸ ಮುರ್ಡೇಶ್ವರ, ಸಂಕಲ್ಪ ಟ್ರಸ್ಟ್ ಅಧ್ಯಕ್ಷ ಕುಮಾರ ಪಟಗಾರ್, ಮುಂಡಗೋಡ ವಿದ್ಯಾಶ್ರೀ ಸಂಸ್ಥೆಯ ಯೋಗೇಂದ್ರ, ಗ್ರೀನ್ ಕೇರ್ ಸಂಸ್ಥೆಯ ಉಪಾಧ್ಯಕ್ಷರಾದ ಪ್ರಶಾಂತ ಮುಳೆ, ನಿರ್ದೇಶಕರಾದ ಗಜಾನನ ಭಟ್, ಉದಯ ನಾಯ್ಕ, ರಜನಿ ದೈವಜ್ಞ, ಉದಯ ಜಯಪ್ಪನವರ್ ಉಪಸ್ಥಿತರಿದ್ದರು, ಸಂಸ್ಥೆಯವತಿಯಿಂದ ಯಲ್ಲಾಪುರದಲ್ಲಿ ತರಬೇತಿ ಪಡೆಯುತ್ತಿರುವ ಶಭಾನ ಗೌಸ್ ಹಾಗೂ ಭಾರತಿ ಬೆಳೆಗಾರ ತರಬೇತಿಯ ಅನುಭವ ಹಂಚಿಕೊಂಡರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ ಆರ್.ಎಂ. ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.