ದಾಂಡೇಲಿ : 2019 – 20 ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನ ಬಿಡುಗಡೆಗೆ ಆಗ್ರಹಿಸಿ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದಿಂದ ಪೌರಾಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ 2019 -20 ನೇ ಸಾಲಿನಲ್ಲಿ 10 ಕೋಟಿ ರೂಪಾಯಿಯ ಕಾಮಗಾರಿಯ ಮಂಜೂರಾಗಿದ್ದು, ಅದಕ್ಕೆ ಜಿಲ್ಲಾಧಿಕಾರಿಗಳು ಕ್ರಿಯಾಯೋಜನೆಗೆ ಮಂಜೂರಾತಿಯನ್ನು ಕೊಟ್ಟಿರುತ್ತಾರೆ. ಅದರಂತೆ 5 ಕೋಟಿ ರೂಗಳ ಟೆಂಡರ್ ಕಾಮಗಾರಿಗಳನ್ನು ಕರೆದಿದ್ದು, ಇದರಲ್ಲಿ ಸುಮಾರು 4 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಒಂದು ವರ್ಷದ ಹಿಂದೆಯೆ ಪೂರ್ಣಗೊಳಿಸಲಾಗಿದೆ. ಆದರೆ ಈವರೆಗೆ ರಾಜ್ಯ ಸರಕಾರದಿಂದ ಸ್ಥಳೀಯ ಸಂಸ್ಥೆಗಳಿಗೆ ನಾಲ್ಕು ಸಲ ಅನುದಾನ ಬಿಡುಗಡೆಯಾಗಿದ್ದರೂ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಸಭೆಗೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಪತ್ರದ ಮೂಲಕ ಹಾಗೂ ಮೌಖಿಕವಾಗಿ ವಿನಂತಿಸಿದರೂ ಮತ್ತು ನಗರ ಸಭೆಯ ಮುಂಬಾಗ ಪ್ರತಿಭಟನೆಯನ್ನು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈಗಾಗಲೇ ಕಾಮಗಾರಿಯನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಸಂಬಂಧಪಟ್ಟ ಕಾಮಗಾರಿಯ ಬಿಲ್ ಮೊತ್ತ ಪಾವತಿಯಾಗದೇ ಇರುವುದರಿಂದ ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಾಗಿದೆ. ಸಾಲ ಸೋಲ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಿದರೂ, ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಗುತ್ತಿಗೆದಾರರ ಜೊತೆ ಕೆಲಸ ಮಾಡುವ ಕಾರ್ಮಿಕರ ಬದುಕು ಕೂಡ ಅಭದ್ರತೆಯಲ್ಲಿದೆ.
ಆರ್ಥಿಕವಾಗಿ ಇದರಿಂದ ಸಂಕಷ್ಟವನ್ನು ಅನುಭವಿಸುತ್ತಿರುವ ಗುತ್ತಿಗೆದಾರರ ಈ ಮನವಿಗೆ ಕೂಡಲೇ ಸ್ಪಂದಿಸಿ, 2019 -20 ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕೆನರಾ ಲೋಕಪಯೋಗಿ ಗುತ್ತಿಗೆದಾರರ ಸಂಘದ ಬಿ.ಎಲ್.ಲಮಾಣಿ, ಕೆ.ಸುಧಾಕರ್ ರೆಡ್ಡಿ, ಚಂದ್ರು ವಿ. ಖೋಕಣಿ, ಎಂ.ಸುಬ್ರಮಣಿ, ಆರ್.ಡಿ.ಜನ್ನು, ಪ್ರದೀಪ ಗವಸ, ಮಂಜುನಾಥ ಪಿಳ್ಳೆ, ಎಂ.ಜಿ.ಖಲೀಪ್ ಮೊದಲಾದವರು ಉಪಸ್ಥಿತರಿದ್ದರು.