Slide
Slide
Slide
previous arrow
next arrow

ಸರಕಾರ ಗೋವಿನ ಉಳಿವಿಗೆ ‘ಭಾಗ್ಯ’ ನೀಡಲಿ; ಗೋಪಾಲಕೃಷ್ಣ ವೈದ್ಯ

300x250 AD

ಗವ್ಯೋತ್ಪನ್ನಗಳ ಲೋಕಾರ್ಪಣೆಗೊಳಿಸಿದ ಗಣ್ಯರು | ಗೋವಿನ ಉಳಿವಿಗೆ ಎಲ್ಲರ ಕರೆ

ಶಿರಸಿ: ಗೋವಿನ ಉಳಿವಿಗಾಗಿ ಸರಕಾರ ಭಾಗ್ಯಗಳ ಮೂಲಕ ಕೈಜೋಡಿಸಬೇಕು. ಮೇವಿನ ಉತ್ಪನ್ನ ಸಹ ಕಡಿಮೆಯಾಗುತ್ತಿದೆ. ಮೇವಿನ ದರ ಏರುತ್ತಿದೆ. ಸರಕಾರದಿಂದ ಉತ್ತೇಜನ ದೊರೆತಾಗ ಮಾತ್ರ ಇಂತಹ ಸಮಸ್ಯೆಗೆ ಪರಿಹಾರ ಸಾಧ್ಯ. ದೂರದೃಷ್ಟಿಯೊಂದಿಗೆ ನಾವು ಜವಾಬ್ದಾರಿ ಸ್ಥಾನದಲ್ಲಿರುವವರು ಹೆಚ್ಚು ಕಾರ್ಯನಿರ್ವಹಿಸಬೇಕೆಂದು ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.

ಅವರು ನಗರದ ಅಂಬಾಗಿರಿಯಲ್ಲಿ ಮಂಗಳವಾರ ಗೋಸೇವಾ ಗತಿವಿಧಿ ಸಹಯೋಗದಲ್ಲಿ ನಡೆದ ಗವ್ಯೋತ್ಪನ್ನಗಳ ಲೋಕಾಪರ್ಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ‌ ದಿನನಿತ್ಯದ ಬಳಕೆಗೆ ಗೋ ಉತ್ಪನ್ನ ಲಭ್ಯವಿರುವುದು ಸಂತಸದ ವಿಷಯ. ಆದರೆ ಇಂದು ನಾವೆಲ್ಲ ಒಂದು ಸಂದಿಗ್ಧ ಸ್ಥಿತಿಯಲ್ಲಿದ್ದೇವೆ. ಗೋವಿನ ಉತ್ಪನ್ನ ಮಾರಾಟ ಮಾಡುವುದು ದೊಡ್ಡ ಸಮಸ್ಯೆಯಿಲ್ಲ. ಆದರೆ ಗೋವನ್ನು ಸಾಕುವವರು ಯಾರು ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ದೇಶಿ ತಳಿಯ ಗೋಸಾಕಾಣಿಕೆ ಆರ್ಥಿಕವಾಗಿ ಕಷ್ಟದ ವಿಷಯವಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ವ್ಯವಸ್ಥಾ ಪ್ರಮುಖ ಸತ್ಯನಾರಾಯಣ ಭಟ್ಟ ಮಾತನಾಡಿ, ನಮ್ಮ ಸನಾತನ ಸಂಸ್ಕೃತಿ ಇಂದು ಉಳಿದುಕೊಂಡಿರುವುದಕ್ಕೆ ಕೌಟುಂಬಿಕ ಪದ್ಧತಿ, ಗೋ ಆಧಾರಿತ ವ್ಯವಸ್ಥೆಯೇ ಕಾರಣವಾಗಿದೆ. ಹಿಂದೂ ಸಂಸ್ಕೃತಿಯ ಉಳಿವಿಗಾಗಿ, ಧರ್ಮದ ರಕ್ಷಣೆಯ ಮೂಲಕ ಹಿಂದೂ ಸಮಾಜದ ಸಂಘಟನೆಯ ಕಾರಣಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಸ್ತಿತ್ವಕ್ಕೆ ಬಂದಿತು. ಇಂದು ಸಂಘ ಸಮಾಜದ ಪ್ರತಿ ಕ್ಷೇತ್ರವನ್ನೂ ತಲುಪಿದೆ. ಸಮಾಜದ ವಿವಿಧ ಆಯಾಮವನ್ನು ಕೇಂದ್ರವನ್ನಾಗಿಸಿಕೊಟ್ಟು ಸಮಾಜದಲ್ಲಿ ಧನಾತ್ಮಕ ಪರಿಣಾಮ ಬೀರುವ ಕೆಲಸ ಸಂಘ ಮಾಡುತ್ತಿದೆ. ಪರ್ಯಾವರಣ, ಗೋಸೇವಾ, ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಧರ್ಮ ಜಾಗರಣ, ಗ್ರಾಮವಿಕಾಸ ಹೀಗೆ ಆರು ಗತಿವಿಧಿಗಳಲ್ಲಿ ಸಂಘ ಕೆಲಸ ಮಾಡುತ್ತಿದೆ.

ಗೋವಿನ ಉತ್ಪನ್ನಗಳ ಮೌಲ್ಯವರ್ಧನೆ ಇಂದಿನ ಅವಶ್ಯಕತೆಯಾಗಿದೆ. ವಿದೇಶದಲ್ಲಿ ಇತ್ತೀಚಿಗೆ ಗೋವಿನ ಪ್ರೇಮ, ವ್ಯಾಮೋಹ ಹೆಚ್ಚುತ್ತಿದೆ. ಗೋ ಹಗ್ಗಿಂಗ್ ಮೂಲಕ ಮನಸ್ಸಿನ ಒತ್ತಡ ನಿವಾರಿಸುವ ಪದ್ಧತಿ ಬೆಳೆಯುತ್ತಿದೆ. ಗೋವಿನ ರಕ್ಷಣೆ ಮಾಡಿದರೆ ನಮ್ಮನ್ನು ನಾವು ರಕ್ಷಿಸಿಕೊಂಡಂತೆ. ವೈಜ್ಞಾನಿಕ ರೀತಿಯಲ್ಲಿ ಗೋವಿನ ಉತ್ಪನ್ನಗಳನ್ನು ಬಳಕೆಗೆ ಯೋಗ್ಯವಿದೆ. ಗವ್ಯೋತ್ಪನ್ನಗಳ ಕುರಿತಾಗಿ ಸಮಾಜದದಲ್ಲಿ ಜಾಗೃತಿ ಮೂಡಿಸುವ ಕೆಲಸ ನಮ್ಮಿಂದಾಗಬೇಕಿದೆ ಎಂದರು.

ಶಿರಸಿ ವಿಭಾಗದ ಗೋಸೇವಾ ಗತಿವಿಧಿ ವಿಭಾಗದ ಸಂಯೋಜಕ ವಿನಾಯಕ ಕಾನಳ್ಳಿ ಪ್ರಸ್ತಾವಿಕ ಮಾತನಾಡಿ, ಗೋ ಆಧಾರಿತ ಕೃಷಿ ಮತ್ತು ಗವ್ಯೋತ್ಪನ್ನಗಳ ಬಳಕೆಯ ನಿಟ್ಟಿನಲ್ಲಿ ಗೋಸೇವಾ ಗತಿವಿಧಿ ಕೆಲಸ ಮಾಡುತ್ತಿದೆ. ಜರ್ಸಿ ಇನ್ನಿತರ ಗೋ ನಮ್ಮ ಆರ್ಥಿಕ ಬಲವನ್ನು ನೀಡಬಹುದೇ ವಿನಃ ಆರೋಗ್ಯದ ದೃಷ್ಟಿಯಿಂದ ಅನಾನುಕೂಲವೇ ಹೆಚ್ಚು. ಗೋ ಆಧಾರಿತ ಕೃಷಿಕರ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಪ್ರತಿ ಗ್ರಾಮ, ಮನೆಗಳಲ್ಲಿ ಗೋಸಾಕುವವರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.

ಟಿಎಂಎಸ್ ಉಪಾಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಮಾತನಾಡಿ, ಗೋಮಾಳಗಳನ್ನು ಅತಿಕ್ರಮಣ ಮಾಡಿ, ಅಲ್ಲಿ ಆರ್ಥಿಕ ಅನುಕೂಲವಾಗಲು ಅಕೇಶಿಯಾದಂತಹ ಸಸಿ ನೆಟ್ಟು, ತಪ್ಪನ್ನು ಎಸಗಿದೆ. ಬದಲಾಗಿ ಗೋಮಾಳದ ಮೂಲಕ ಗೋವಿನ ರಕ್ಷಣೆ ಸರಕಾರ ಮಾಡಬೇಕಿತ್ತು. ಇಂದು ದನ ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ದನ ಸಾಕಲು ಜನವಿಲ್ಲ, ಜನ ಸಾಕಲು ಜಾಗವಿಲ್ಲ ಎಂಬಂತಾಗಿದೆ. ಜನಸಮೂಹದಲ್ಲಿ ಗವ್ಯೋತ್ಪನ್ನದಂತಹ ವಸ್ತುಗಳ ಪರಿಚಯ ಆಗಬೇಕಿದೆ.

ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಬುಲಿಂಗ ಹೆಗಡೆ ಮಾತನಾಡಿ, ಹಾಲು ಒಕ್ಕೂಟಗಳು ಹಾಲಿನ ಉತ್ಪಾದನೆ ಜೊತೆಗೆ ಗವ್ಯೋತ್ಪನ್ನಗಳ ಕುರಿತು ಜಾಗೃತಿ ವಹಿಸಬೇಕು. ನಮ್ಮ ಕದಂಬ ಸಂಸ್ಥೆಯಲ್ಲಿ ಇಂತಹ ಉತ್ಪನ್ನಗಳ ಜೊತೆಗೆ ಸ್ಥಳೀಯ ಜನರ, ಸಂಘಗಳ ಉತ್ಪನ್ನಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ. ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದರು. ಅದರ ಜೊತೆಗೆ ಗೋಮಾತೆ, ತಂದೆ-ತಾಯಿಗಳನ್ನು ದೂರಮಾಡುವುದು ಸಮಾಜದ ದುರಂತವಾಗಿದೆ ಎಂದರು.

300x250 AD

ಕಾರ್ಯಕ್ರಮ‌ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಮಾತನಾಡಿ, ಗೋವಿನ‌ ಉತ್ಪನ್ನಗಳ ಬಳಕೆ ನಾವು ಹೆಚ್ಚಿಸಬೇಕು. ಸರಕಾರದ ಭಾಗ್ಯಗಳ ಯೋಜನೆಯನ್ನು ಗೋಸಾಕಾಣಿಕೆಗೆ ಬಳಸಲೂ ನಮಗೆ ಅವಕಾಶವಿದೆ. ನಮ್ಮೆಲ್ಲರ ಮನೆಯಲ್ಲಿ ದೇಶೀ ಗೋವನ್ನು ಸಾಕಬೇಕು.

ವೇದಿಕೆಯಲ್ಲಿ ಶ್ರೀರಾಮಕೃಷ್ಣ ಕಾಳಿಕಾಮಠ ಅಂಬಾಗಿರಿಯ ಅಧ್ಯಕ್ಷ ವಿ.ಎಂ.ಹೆಗಡೆ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಕಮಲಾಕರ ಹೆಗಡೆ ಮತ್ತು ತಂಡದವರು ಸುಶ್ರಾವ್ಯವಾಗಿ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ನಂತರ ಹರಿದಾಸರತ್ನ ನಾರಾಯಣದಾಸರ ಹರಿಕಥೆ, ಕೀರ್ತನೆ ನಡೆಯಿತು.

ಗೋಸೇವೆ ಗತಿವಿಧಿಯ ಪ್ರಮುಖರಾದ ದತ್ತಾತ್ರೇಯ ಕಾರ್ಯಕ್ರಮದಲ್ಲಿ ವಿವಿಧ ಗವ್ಯೋತ್ಪನ್ನಳಾದ ತಲೆನೋವು-ನೆಗಡಿ-ಜ್ವರ ನಿವಾರಣೆಗಾಗಿ ನಿವೇದನ ಮುಲಾಮು, ಹಿಮ್ಮಡಿಯ ಒಡಕಿನ ನಿವಾರಣೆಗಾಗಿ ಸುಚರಣ, ಉದರ ಸಂಬಂಧಿ ಕಾಯಿಲೆಯ ಸಂಬಂಧಿಸಿ ತಕರಾರಿಷ್ಠ, ಪಂಚಗವ್ಯಗ್ರತ, ಗೋತೀರ್ಥ ಅರ್ಕ, ತಾಮ್ರಗೌರ ಪೌಡರ್, ಗೋಮಯ ಧೂಪ, ಗೋರಕ್ಷಾ ಕವಚ, ಗೋಮಯ ಪೌಡರ್ ಸೇರಿದಂತೆ ಅನೇಕ ಉತ್ಪನ್ನಗಳನ್ನು ಪರಿಚಯಿಸಲಾಯಿತು.

ಕಳೆದ ವರ್ಷದ ಪರಿಷತ್ ಅವಧಿಯಲ್ಲಿಯೂ ಗೋಶಾಲೆಯ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈಗಾಗಲೇ ಸರಕಾರದ ಮಟ್ಟದಲ್ಲಿ ಮೇವು ಬ್ಯಾಂಕ್ ಕುರಿತಾಗಿ ವಿಷಯ ಪ್ರಸ್ತಾಪಿಸಲಾಗಿದೆ.–ಶಾಂತಾರಾಮ ಸಿದ್ದಿ, ವಿಧಾನ ಪರಿಷತ್ ಸದಸ್ಯ


ಹಿಂದೂ ಧರ್ಮ ಸನಾತನವಾದುದ್ದು. ಅವಿನಾಶಿವಾದುದ್ದು. ಹಿಂದೂ ಧರ್ಮ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿರುವುದಕ್ಕೆ ಪ್ರಮುಖ ಕಾರಣ ಗೋ ಆಧಾರಿತ ಕೃಷಿಯಾಗಿದೆ. ಗೋವಿನ ರಕ್ಷಣೆ ಎಲ್ಲ ಹಿಂದುಗಳ ಯಾವತ್ತಿನ ಕರ್ತವ್ಯ.–ಸತ್ಯನಾರಾಯಣ ಭಟ್ಟ, ವಿಭಾಗ ವ್ಯವಸ್ಥಾ ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ, ಶಿರಸಿ

Share This
300x250 AD
300x250 AD
300x250 AD
Back to top