ಸಿದ್ದಾಪುರ: ನಾವು ಮಾಡುವ ವೃತ್ತಿಯಲ್ಲಿ ಪ್ರೀತಿ ಮತ್ತು ನಿಷ್ಠೆ ಅತ್ಯಂತ ಅಗತ್ಯವಾಗಿದೆ. ಯಾವುದೇ ಕೆಲಸವಿರಲಿ ಅದನ್ನು ಸಮರ್ಪಕವಾಗಿ ನಿರ್ವಹಿಸುವುದೇ ನಮ್ಮ ಪ್ರಥಮ ಉದ್ದೇಶವಾಗಿರಬೇಕು. ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಸಮಯಪಾಲನೆ ಹಾಗೂ ಬೋಧಕೇತರ ಸಿಬ್ಬಂದಿಗಳು ತಮ್ಮ ಕರ್ತವ್ಯದ ಪ್ರಜ್ಞೆಯೊಂದಿಗೆ ಸಾಗಿ ಬಂದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಸಾಹಿತಿಗಳಾದ ಜಿ.ಜಿ. ಹೆಗಡೆ ಬಾಳಗೋಡ ಅವರು ಹೇಳಿದರು.
ಮಲೆನಾಡು ಪ್ರೌಢಶಾಲೆ ಕಾವಂಚೂರುದಲ್ಲಿ ಬೋಧಕೇತರ ಸಿಬ್ಬಂದಿಯಾದ ಗಂಗಾಧರ ಎನ್. ಶೆಟ್ಟಿ ಅವರು ವಯೋನಿವೃತ್ತಿ ಹೊಂದಿದ್ದು ಅವರನ್ನು ಗೌರವಿಸಿ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಕರು ವರ್ಗದ ಕೋಣೆಯಲ್ಲಿ ಜೀವಂತ ಮಾದರಿಯಾಗಿದ್ದು ಸಾಕಷ್ಟು ವಿಷಯವನ್ನು ಸಂಗ್ರಹಿಸಿಕೊಂಡು ಬೋಧನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯಶಿಕ್ಷಕ ಎಲ್.ಐ. ನಾಯ್ಕ ಗೋಳಗೋಡ ಅವರು ವಹಿಸಿ ಮಾತನಾಡಿ ಎಲ್ಲಾ ನೌಕರರು ತಮ್ಮ ಕರ್ತವ್ಯದ ಭಾಗವಾಗಿ ಮಾಡಬೇಕಾದ ಕೆಲಸವನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿಕೊಂಡು ಬಂದಲ್ಲಿ ಯಾವುದೇ ವಿಳಂಬವಿಲ್ಲದೇ ಸರಕಾರದ ಕೆಲಸ, ಸಂಸ್ಥೆಯ ಕೆಲಸ ಸಾಗಲು ಸಾಧ್ಯ. ತಮ್ಮ ಕೆಲಸದಲ್ಲಿ ಶ್ರಮ ವಹಿಸಿ ದುಡಿಯುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕಿ ಸ್ವರ್ಣಲತಾ ಎನ್. ಶಾನಭಾಗ ಹಾಗೂ ನಿವೃತ್ತ ಶಿಕ್ಷಕಿ ಕೆ.ಎಲ್. ಗಾಯತ್ರಿ ಮತ್ತು ನಿವೃತ್ತ ಶಿಕ್ಷಕ ಬಿ.ಜಿ. ನಾಯ್ಕ, ನಿವೃತ್ತ ಸಿಬ್ಬಂದಿ ಪಿ.ಟಿ. ನಾಯ್ಕ ಗೋಳಗೋಡ ಅವರು ಮಾತನಾಡಿದರು. ಕಾವಂಚೂರು ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷ ಶ್ರೀಧರ ಶೇಟ್ ಮತ್ತು ಶಿಕ್ಷಕಿ ವಿನುತಾ ನಾಯ್ಕ, ಶೈಲಾ ಕಟ್ಟೆಮನೆ, ವಸಂತ ನಾಯ್ಕ, ಕಿರಣ ಡಿ. ಹಾಗೂ ಮುಖ್ಯಶಿಕ್ಷಕ ಸುರೇಶ ಇ. ಶಿಕ್ಷಕ ರಾಜು ಲಮಾಣಿ, ದೇವರಾಜ ಶೇಟ್ ಅವರುಗಳು ಮಾತನಾಡಿದರು.
ಸನ್ಮಾನಿತ ಗಂಗಾಧರ ಎನ್. ಶೆಟ್ಟಿ ಅವರು ಕೃತಜ್ಞತೆಯನ್ನು ಅರ್ಪಿಸಿ ತಾನು 38 ವರ್ಷಗಳ ಕಾಲ ಈ ಸಂಸ್ಥೆಗೆ ಸೇವೆ ಸಲ್ಲಿಸಿದ್ದು, ತನ್ನನ್ನು ಗೌರವಿಸಿದ್ದಕ್ಕೆ ಸಂತೋಷವಿದೆ ಎಂದು ಹೇಳಿದರು. ಭಾವನಾ ಸಂಗಡಿಗರು ಪ್ರಾರ್ಥನೆಗೈದರು. ಮುಖ್ಯಶಿಕ್ಷಕ ಸುರೇಶ ಇ. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ವ್ಯಕ್ತ ಪಡಿಸಿದರು. ಶಿಕ್ಷಕ ರಾಜು ಲಮಾಣಿ ನಿರೂಪಿಸಿದರು. ಕಿರಣ ಡಿ. ವಂದಿಸಿದರು.