ಯಲ್ಲಾಪುರ: ತಾಲೂಕಿನಲ್ಲಿ ಅಧಿಕೃತ ಐದು ಢೆಂಘಿ ಜ್ವರ ವರದಿಯಾಗಿದೆ. ಪ.ಪಂ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಹೇಳದರು.
ಅವರು ಗುರುವಾರ ತಾ.ಪಂ. ಸಭಾಭವನದಲ್ಲಿ ತಾಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಇಲಾಖೆಯ ಪ್ರಗತಿ ಕುರಿತು ಮಾತನಾಡುತ್ತಿದ್ದರು. ಡೆಂಘಿಜ್ವರದ ಬಗ್ಗೆ ಆತಂಕ ಬೇಡ. ತಕ್ಷಣ ಚಿಕಿತ್ಸೆ ಕೊಡಿ. ಈಬಗ್ಗೆ ನಿರ್ಲಕ್ಷ್ಯ ಬೇಡ ಎಂದರು. ಡೆಂಘಿ ಜ್ವರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಸೂಚಿಸಿದರು.
ಪಶುಸಂಗೋಪನೆ ಇಲಾಖೆಯ ಸಹಾಯಕನಿರ್ದೇಶಕ ಡಾ.ಸುಬ್ರಾಯ ಭಟ್ಟ ಮಾಹಿತಿನೀಡಿ, ಜಾನುವಾರುಗಳಿಗೆ ಚರ್ಮ ಗಂಟು ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಔಷಧಿ ಕೊರತೆ ಇಲ್ಲ. ಮೇವಿನ ಮಿನಿ ಕಿಟ್ ನೀಡಲಾಗಿದ್ದು,ಮೇವಿನ ಕೊರತೆ ಇಲ್ಲ. ಸಿಬ್ಬಂದಿ ಕೊರತೆ ಹೊರತಾಗಿ ಉಳಿದ ಸಮಸ್ಯೆ ಇಲ್ಲ ಎಂದರು.
ತಾ.ಪಂ.ಬಜೇಟ್‌ನ್ನು ಲೆಕ್ಕಾಧಿಕಾರಿ ಮೋಹನ ಮಂಡಿಸಿ, ತಾಪಂ ಹಾಗೂ ಅಧೀನ ಇಲಾಖೆಗಳಿಗೆ ವೇತನ ಹಾಗೂ ಅನುದಾನ ಸಂಬಂಧಿಸಿದಂತೆ ಒಟ್ಟು ೬೨.೨೬ ಕೋಟಿ ಬಜೆಟ್ ಮಂಡಿಸಿದ್ದು ಅನುಮೋದನೆಗೆ ಪಡೆದರು.
ಅಡಿಕೆ ಮಿಡಿ ಉದುರುವುದು ಹೆಚ್ಚಿದ್ದು ಈಬಗ್ಗೆ ತೋಟಗಾರಿಗೆ ಅಗತ್ಯ ಸೂಚನೆ ನೀಡಬೇಕು. ಅಡಿಕೆ ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ರೋಗಕ್ಕೆ ತುತ್ತಾದ ಎಲೆಗಳನ್ನು ಕತ್ತರಿಸಿ ಹಾಕಬೇಕು ಎಂದು ತೋಟಗಾರಿಕೆ ಇಲಾಖೆಯ ಕೀರ್ತಿ ಮಾಹಿತಿ ನೀಡಿದರು.
ತಾಪಂ ಆಡಳಿತಾಧಿಕಾರಿ ನಟರಾಜ್ ಟಿ. ಮುಂಗಾರು ಹಂಗಾಮಿನಲ್ಲಿ ಎಲ್ಲಾ ಸರಕಾರಿ ನೌಕರರು ಕೇಂದ್ರ ಸ್ಥಾನದಲ್ಲಿದ್ದು,ಕಾರ್ಯ ನಿರ್ವಹಿಸಬೇಕು. ತುರ್ತಾಗಿ ಅತಿವೃಷ್ಠಿ ಸಮಸ್ಯೆಗಳಿಗೆ ಸ್ಪಂದಿಸಬೇಕು. ಯಾವುದೇ ಅನುದಾನ ವಾಪಾಸು ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಇಒ ಎನ್.ಆರ್.ಹೆಗಡೆ ಮಾತನಾಡಿ, ಮಳೆ ಕೊರತೆ ಹಿನ್ನೆಲೆಯಲ್ಲಿ ಅಂತರಜಲ ಮಟ್ಟ ಹೆಚ್ಚಿಸುವ ಸಲುವಾಗಿ ಮಳೆ ನೀರು ಇಂಗಿಸುವ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಿದರು. ಬಹುತೇಕ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು.