ಯಲ್ಲಾಪುರ : ಪರಿಸರದಲ್ಲಿರುವ ಪ್ರತಿಯೊಂದು ಜೀವಿಯೂ ಪರಸ್ಪರ ಅವಲಂಬಿತವಾಗಿದೆ ಎಂದು ರಾಷ್ಟ್ರೀಯ ಜೀವ ವೈವೀದ್ಯತಾ ಪ್ರಾಧಿಕಾರದ ಸದಸ್ಯರಾದ ಡಾ. ವಿ ಎಸ್ ಹಂಚಿನಾಳ್ ನುಡಿದರು.
ಅವರು ಐಸಿಎಆರ್, ಕೃಷಿ ವಿಶ್ವವಿದ್ಯಾನಿಲಯ ಧಾರವಾಡ, ಸ್ಕೊಡವೆಸ್ ಸಂಸ್ಥೆ ಶಿರಸಿ , ಕೃಷಿ ವಿಜ್ಞಾನ ಕೇಂದ್ರ ಶಿರಸಿ, ತೋಟಗಾರಿಕಾ ಇಲಾಖೆ ಯಲ್ಲಾಪುರ, ರಾಷ್ಟ್ರೀಯ ಜೀವ ವೈವಿಧ್ಯತ ಪ್ರಾಧಿಕಾರ, ಕರ್ನಾಟಕ ಜೀವ ವೈವಿಧ್ಯತ ನಿಗಮ, ಲೈಫ್ ಸಂಸ್ಥೆ ಇವರ ಸಹಯೋಗದಲ್ಲಿ ಇಲ್ಲಿನ ಹಾಸಣಗಿ ಪಂಚಾಯತ ಸಭಾಂಗಣದಲ್ಲಿ ವಿಶ್ವ ಜೇನು ದಿನ ಮತ್ತು ವಿಶ್ವ ಜೀವ ವೈವಿಧ್ಯದ ದಿನದ ಅಂಗವಾಗಿ ಆಯೋಜಿಸಿದ ಜೇನುಕೃಷಿ ಮಾಹಿತಿ ಕಾರ್ಯಾಗಾರವನ್ಜು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯು ಕೂಡ ಪರಸ್ಪರ ಅವಲಂಬಿತವಾಗಿದೆ. ಮಾತ್ರವಲ್ಲ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಮತೋಲನವಾಗಿಡುವಲ್ಲಿ ಹಾಗೂ ಸಂರಕ್ಷಿಸುವಲ್ಲಿ ಪ್ರತಿಯೊಂದು ಜೀವಿಗಳ ಪಾತ್ರವು ಪ್ರಮುಖವಾಗಿದೆ. ಹಾಗೆಯೇ ಜೇನು ಹುಳುಗಳು ಕೂಡ ಈ ಪರಿಸರ ವ್ಯವಸ್ಥೆಯಲ್ಲಿ ತಮ್ಮದೇ ಆದ ಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ ಅವುಗಳನ್ನು ಸಂರಕ್ಷಿಸುವ ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ. ಹಿನ್ನೆಲೆಯಲ್ಲಿ ವಿಶ್ವ ಜೇನು ದಿನಾಚರಣೆಯ ಅಂಗವಾಗಿ ಸ್ಕೊಡವೆಸ್ ಸಂಸ್ಥೆ ಪರಿಸರಕ್ಕೆ ಪೂರಕವಾದ,ರೈತರ ಆದಾಯ ಹೆಚ್ಚಿಸುವ ಜೇನು ಕೃಷಿ ತರಬೇತಿಯನ್ನು ಆಯೋಜಿಸಿರುವುದು ಅರ್ಥಪೂರ್ಣ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆವಿಕೆಯ ಮುಖ್ಯಸ್ಥರಾದ ರೂಪಾ ಪಾಟೀಲ್, ವಿವಿಧ ಪ್ರಕಾರದ ಜೇನುಗಳು ಮತ್ತು ಜೇನು ಕೃಷಿಯಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸತೀಶ ಹೆಗಡೆ ಮಾತನಾಡಿ ವಿಶ್ವ ಜೇನು ದಿನಾಚರಣೆಯ ಹಿನ್ನೆಲೆ ಮತ್ತು ಮಹತ್ವದ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ಜೇನು ಕೃಷಿಕರಾದ ಗುರುಮೂರ್ತಿ ಹೆಗಡೆ ಜೇನು ಕೃಷಿ ಮಾಡುವ ಬಗೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸ್ಕೊಡವೆಸ್ ಸಂಸ್ಥೆಯ ಪರೇಶ್ ಹೆಗಡೆ, ಉಮೇಶ್ ಮರಾಠಿ, ಮಂಜುನಾಥ ಸಿರ್ಸಿಕರ್, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ಕೊಡವೆಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ನಿರೂಪಿಸಿದರುಕಾರ್ಯಕ್ರಮದಲ್ಲಿ ಹಾಸಣಗಿ ಪಂಚಾಯತ ವ್ಯಾಪ್ತಿಯ ಜೇನು ಕೃಷಿ ಆಸಕ್ತ ರೈತರು ಉಪಸ್ಥಿತರಿದ್ದರು.