ಭಟ್ಕಳ: ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಭಟ್ಕಳ ಮಜ್ಲಿಸ್ ಇಸ್ಲಾಹ್ ವ ತಂಝೀಮ್ ನ ಕಾರ್ಯಕಾರಿ ಸದಸ್ಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.
ಮಜ್ಲಿಸ್ ಇಸ್ಲಾಹ್ ವ ತಂಝೀಮ್ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸದಸ್ಯರು ಮಾಜಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದಶಕಗಳಿಂದ ನಿರಂತರವಾಗಿ ದೇಶಪಾಂಡೆಯವರಿಗೆ ಮತ ಹಾಕುತ್ತಾ ಬಂದರೂ, ದೇಶಪಾಂಡೆ ಅವರಿಂದ ಸಾಕಷ್ಟು ನೆರವು ಮತ್ತು ಸಹಕಾರ ದೊರಕಿಲ್ಲ ಎಂದು ಆಡಳಿತ ಮಂಡಳಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್.ವೈದ್ಯ ಅವರು ಮುಂಬರುವ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲು ತಂಝೀಮ್‍ಗೆ ತೆರಳಿದ್ದ ವೇಳೆ ಮಾತುಕತೆ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಮೂರು ದಶಕಗಳಿಂದ ದೇಶಪಾಂಡೆಯವರನ್ನು ಬೆಂಬಲಿಸುತ್ತಾ ಬಂದರೂ, ಭಟ್ಕಳ ಕ್ಷೇತ್ರಕ್ಕೆ ಅಥವಾ ಇಲ್ಲಿನ ಜನತೆಗೆ ಯಾವುದೇ ಪ್ರಯೋಜನ ಸಿಕ್ಕಿಲ್ಲ ಎಂದು ತಂಝೀಂ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಇದು ಸದಸ್ಯರು ಮತ್ತು ದೇಶಪಾಂಡೆ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಈ ಆಕ್ಷೇಪದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಲ್ಲದೇ, ಇದರಿಂದ ತಮಗೆ ಬೇಸರವಾಗಿದೆ ಎಂದು ದೇಶಪಾಂಡೆ ಹೇಳಿದ್ದಾರೆ.
ತಂಝೀಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ ಮಾತನಾಡಿ, ದೇಶಪಾಂಡೆ ಬಗ್ಗೆ ಸಮುದಾಯದ ಸದಸ್ಯರಲ್ಲಿ ಹಲವು ವರ್ಷಗಳಿಂದ ಅಸಮಾಧಾನ ಹೆಚ್ಚುತ್ತಿದೆ ಎಂದು ಹೇಳಿದರು. ನೆರೆ ಜಿಲ್ಲೆಗಳು ಮತ್ತು ಕ್ಷೇತ್ರಗಳಿಗೆ ಹೋಲಿಸಿದರೆ, ಭಟ್ಕಳದ ಅಭಿವೃದ್ಧಿಗೆ ದೇಶಪಾಂಡೆ ಯಾವುದೇ ಗಮನಾರ್ಹ ಕೊಡುಗೆ ನೀಡಿಲ್ಲ ಎಂದು ಟೀಕಿಸಿದರು.