ಹೊನ್ನಾವರ : ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶರಾವತಿ ನದಿಯಿಂದ ಮರಳು ಸಾಗಾಟ ನಡೆಸಲು ೪೨ ಜನರಿಗೆ ಪಾಸ್ ನೀಡುವ ಮೂಲಕ ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ತುಂಬೊಳ್ಳಿ ರಮೇಶ ನಾಯ್ಕ ಆರೋಪಿಸಿದ್ದಾರೆ.
ಅವರು ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ನಮ್ಮ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಕಳೆದ ಫೆಬ್ರವರಿ ೧೮ ರಂದು ಮರಳುಗಾರಿಕೆಗೆ ಸಂಬಂಧಪಟ್ಟ ಸಭೆ ನಡೆಸಿ ಮರಳು ಗಣಿಗಾರಿಕೆ ಪ್ರಾರಂಭ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಕರಾವಳಿಯ ಮೂರೂ ಜಿಲ್ಲೆಗಳಲ್ಲಿಯೂ ಸಾಂಪ್ರದಾಯಿಕ ಮರಳುಗಾರಿಕೆಗೆ ಮಾತ್ರ ಅವಕಾಶವಿದೆ. ನಮ್ಮ ತಾಲೂಕಿನಲ್ಲಿ ೪೨ ಜನರಿಗೆ ಮರಳು ತೆಗೆಯಲು ಅನುಮತಿ ನೀಡಲಾಗಿದೆ. ಆದರೆ ಅನುಮತಿ ಪಡೆದವರಲ್ಲಿ ಬಹುತೇಕ ಜನರು ಸಾಂಪ್ರದಾಯಿಕ ಮರಳು ತೆಗೆಯಲು ಅರ್ಹತೆ ಇಲ್ಲದವರೇ ಆಗಿದ್ದಾರೆ. ಇವರಿಗೆ ದೋಣಿ ಚಲಾಯಿಸಲು ಬರುವುದಿಲ್ಲ. ಇಂಥವರೆಲ್ಲ ತಾವು ಸಾಂಪ್ರದಾಯಿಕ ಮರಳು ತೆಗೆಯುವವರು ಎಂದು ಹೇಳಿಕೊಂಡು ಆಮಿಷವೊಡ್ಡಿ ಪಾಸ್ ಪಡೆದುಕೊಂಡಿದ್ದಾರೆ. ಇವರ ಒತ್ತಡಕ್ಕೆ ಮಣಿದು ಹಣ ತೆಗೆದುಕೊಂಡು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿ ಅಧಿಕಾರಿಗಳು ಪಾಸ್ ನೀಡಿದ್ದಾರೆ. ಇದರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಶಾಮೀಲಾಗಿದ್ದಾರೆ ಎಂದರು.
ತಾತ್ಕಾಲಿಕ ಪರವಾನಗಿ ಪಡೆದವರಿಗೆ ನಿಯಮಾವಳಿ ಪ್ರಕಾರ ಒಂದು ವಾಹನದಲ್ಲಿ ಗರಿಷ್ಠ ೧೦ ಟನ್ ಮರಳನ್ನು ಮಾತ್ರ ಸಾಗಿಸಲು ಅವಕಾಶವಿದೆ. ಆದರೆ ಯಾವುದೇ ಮಾಪನ ಇಲ್ಲದೇ ಮನಬಂದಂತೆ ಮರಳು ಸಾಗಾಟ ಮಾಡುತ್ತಿದ್ದಾರೆ. ಒಂದು ವಾಹನದಲ್ಲಿ ೧೩ ರಿಂದ ೧೮ ಟನ್‌ಗಳಷ್ಟು ಅಂದರೇ ೩ ರಿಂದ ೮ ಟನ್‌ಗಳಷ್ಟು ಹೆಚ್ಚು ಮರಳನ್ನು ಸಾಗಿಸಲಾಗುತ್ತಿದೆ. ಮರಳು ವಾಹನದ ಎತ್ತರವನ್ನು ಏರಿಸಿ ಹೆಚ್ಚಿನ ಮರಳನ್ನು ಸಾಗಾಟ ಮಾಡುತ್ತಾರೆ. ಇದರಿಂದ ಸರ್ಕಾರ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟವಾಗುತ್ತಿದೆ. ಶರಾವತಿ ನದಿಯಿಂದ ಬೃಹತ್ ಪ್ರಮಾಣದ ಮರುಳು ಸಾಗಾಟ ನಡೆಯುತ್ತಿದ್ದರೂ ಮರಳನ್ನು ತೂಕ ಮಾಡುವ ಮಾಪನಯಂತ್ರವನ್ನು ತಾಲೂಕಿನಲ್ಲಿ ಎಲ್ಲೂ ಅಳವಡಿಸಿಲ್ಲ. ಇದರಿಂದ ಪಾಸ್ ಪಡೆದುಕೊಂಡು ಹೆಚ್ಚುವರಿ ಮರಳು ಸಾಗಾಟ ಮಾಡುವವರಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗಿದೆ. ಪಾಸ್ ಪಡೆದವರೇ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದಾರೆ ಎಂದರು.
ತಾಲೂಕಿಗೆ ಬುಧವಾರ ಡಿಎಂಜಿ ಅಧಿಕಾರಿ ಆಶಾ ಎಂ.ಎಸ್. ಅವರು ಭೇಟಿ ನೀಡಿದ್ದರು. ಪಾಸ್ ಹೊಂದಿದವರು ನಿಗದಿತ ಪ್ರಮಾಣಕ್ಕೆಇಂತ ಹೆಚ್ಚಿನ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಆದರೆ ಅವರು ವಾಹನ ಪಂಕ್ಚರ್ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಮತ್ತು ನ್ಯಾಯಾಲಯದ ಮೊರೆ ಹೋಗಿರುವುದನ್ನು ಗಮನಿಸಿ ಈ ಅಧಿಕಾರಿ ನಮ್ಮ ಮೇಲೆಯೆ ಸುಳ್ಳು ದೂರು ನೀಡಿದ್ದಾರೆ. ಇದೊಂದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದರು.
ಈವರೆಗೂ ನಮ್ಮ ಜಿಲ್ಲೆಯಲ್ಲಿ ಹೊಸ ಮರಳು ನೀತಿ ಜಾರಿಯಾಗಿಲ್ಲ. ಇದರಿಂದ ನೈಜ ಪಾರಂಪರಿಕ ಮರಳುಗಾರಿಕೆದಾರರಿಗೆ ಅನುಕೂಲವಾಗುತ್ತಿತ್ತು. ಇಲಾಖೆ ಅಧಿಕಾರಿಗಳು ಉಳ್ಳವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ೧೦೦ ರಿಂದ ೧೫೦ ಕೋಟಿ ರೂ. ಗಳಷ್ಟು ರಾಜಧನ ನಷ್ಟವಾಗಿದ್ದು ಇದು ಹಗಲು ದರೋಡೆಯಾಗಿದೆ. ಈಗ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಹೋರಾಟವನ್ನು ಮುಂದೂಡಿದ್ದೇವೆ. ಚುನಾವಣೆ ಪ್ರಕ್ರಿಯೆ ನಡೆದ ನಂತರ ಜಿಲ್ಲಾಧಿಕಾರಿ ಕಚೇರಿ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು
ಈ ಸಂದರ್ಭದಲ್ಲಿ ಗಣೇಶ ನಾಯ್ಕ ಗೇರುಸೊಪ್ಪಾ, ಜಗದೀಶ ನಾಯ್ಕ , ಆನಂದ ನಾಯ್ಕ, ಬಾಲಕೃಷ್ಣ ಗೌಡ, ದಿನೇಶ ನಾಯ್ಕ, ಸುಬ್ರಾಯ ನಾಯ್ಕ ಇದ್ದರು.