Slide
Slide
Slide
previous arrow
next arrow

ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ

300x250 AD

ಹೊನ್ನಾವರ: ಬಿಜೆಪಿ ಬಿಜೆಪಿ ಎಂದು ಕುಣಿಯುವ ೧೮ ವರ್ಷದ ಯುವಕರಿಗೆ ಮತ ಹಾಕುವ ಅವಕಾಶ ಮಾಡಿಕೊಟ್ಟಿದ್ದು, ರಾಜಕೀಯದಲ್ಲಿ ಮಹಿಳಾ ಮೀಸಲಾತಿ ತಂದಿದ್ದು ರಾಜೀವ್ ಗಾಂಧಿಯವರು, ಕಾಂಗ್ರೆಸ್ ಪಕ್ಷ ನೀಡಿದ್ದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.

ಹಳದಿಪುರದಲ್ಲಿ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಮಹಿಳೆಯರಿಗೆ ಅವಕಾಶ ಸಿಗೋದೆ ಕಡಿಮೆ. ಸಂಸತ್ ಚುನಾವಣೆಯಲ್ಲಿ ಜಿಲ್ಲೆಯಿಂದ ಮೊದಲು ಮಾರ್ಗರೇಟ್ ಆಳ್ವಾ ಅವರಿಗೆ ಕಾಂಗ್ರೆಸ್ ಅವಕಾಶ ನೀಡಿತ್ತು, ಉತ್ತಮ ಕೆಲಸ ಮಾಡಿದ್ದರು. ಎರಡನೇ ಬಾರಿಗೆ ಡಾ.ಅಂಜಲಿ ಅವರಿಗೆ ಅವಕಾಶ ನೀಡಿದ್ದೇವೆ. ಸಂಸತ್ ಚುನಾವಣೆಯಲ್ಲಿ ಬಿಜೆಪಿಗರು ಮಹಿಳೆಯರಿಗೆ ಅವಕಾಶ ಕೊಟ್ಟಿದ್ದೇ ಇಲ್ಲ ಎಂದರು.

ಮೋದಿ ಕೂಡ ಬಿಜೆಪಿ ಹೆಸರು ಹೇಳಲ್ಲ, ‘ಮೋದೀ ಕೀ ಗ್ಯಾರಂಟಿ’ ಎನ್ನುತ್ತಾರೆ. ನಾವೆಲ್ಲಿಯೂ ಸಿದ್ದರಾಮಯ್ಯ, ಸೋನಿಯಾ ಗ್ಯಾರಂಟಿ ಎನ್ನಲ್ಲ; ನಮ್ಮದು ಕಾಂಗ್ರೆಸ್ ಗ್ಯಾರಂಟಿ. ಬಿಜೆಪಿ ಎಂಬ ಪಕ್ಷವಿದ್ದರೂ ಅದರಲ್ಲಿರುವವರು ಮೋದಿ ಹೆಸರಲ್ಲಿ ಮತ ಕೇಳುತ್ತಾರೆ. ಮೋದಿಯವರ ಆಶ್ವಾಸನೆಯಂತೆ ೧೦ ವರ್ಷದಲ್ಲಿ ೨೦ ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಯುವಜನರು ಉದ್ಯೋಗವಿಲ್ಲದೆ ಖಾಲಿ ಕುಳಿತಿದ್ದಾರೆ. ೧೦ ವರ್ಷದಲ್ಲಿ ಒಂದೂವರೆ ಕೋಟಿ ಉದ್ಯೋಗವನ್ನೂ ನೀಡಲು ಬಿಜೆಪಿಗರಿಂದ ಆಗಿಲ್ಲ ಎಂದರು.

೩೦ ವರ್ಷಗಳಲ್ಲಿ ಏನೂ ಅಭಿವೃದ್ಧಿ ಕಾರ್ಯ ಮಾಡಿಲ್ಲ‌. ಒಂದೇ ಒಂದು ದಿನ ಸಂಸದರು ಲೋಕಸಭೆಯಲ್ಲಿ ಮಾತನಾಡಿಲ್ಲ. ಸಂಸತ್‌ಗೆ ಹೋಗಿ ಬಂದಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ. ಗ್ಯಾರಂಟಿಯನ್ನ ಚೇಷ್ಠೆ ಮಾಡುತ್ತಿದ್ದ ಪ್ರಧಾನಿ, ಬಿಜೆಪಿಗರೇ ಆ ಶಬ್ದವನ್ನೇ ಕಳ್ಳತನ ಮಾಡಿದ್ದಾರೆ ಎಂದು ಟೀಕಿಸಿದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಎಲ್ಲಾ ವಸ್ತುಗಳ ಮೇಲೂ ಜಿಎಸ್‌ಟಿ ಹೇರಿದ್ದಾರೆ. ಬಿಜೆಪಿಯ ಆಡಳಿತ ದುಬಾರಿಯಾಗಿದೆ. ರಾಜ್ಯ ಕಾಂಗ್ರೆಸ್ ಈಗಾಗಲೇ ಐದು ಗ್ಯಾರಂಟಿ ನೀಡಿದೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮತ್ತೈದು ಗ್ಯಾರಂಟಿ ತರುತ್ತೇವೆ. ಈ ಭಾಗದಲ್ಲಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅರಣ್ಯ ಅತಿಕ್ರಮಣಸಮಸ್ಯೆ ಬಗ್ಗೆ ಸಂಸತ್‌ನ ಮೊದಲ ಅಧಿವೇಶನದಲ್ಲೇ ಧ್ವನಿ ಎತ್ತುತ್ತೇನೆ. ಒಮ್ಮೆ ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದರೆ ಬದಲಾವಣೆ ತಂದು ತೋರಿಸುತ್ತೇನೆ ಎಂದು ಭರವಸೆ ನೀಡಿದರು‌.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಈ ಜಿಲ್ಲೆ ೩೦ ವರ್ಷ ಅನಾಥವಾಗಿದೆ. ೧೦ ವರ್ಷ ಕೇಂದ್ರದಲ್ಲೂ ಕೇಳುವವರಿಲ್ಲದಾಗಿದೆ‌‌. ಈ ಜಿಲ್ಲೆಯ ಹೆಸರು ಕೂಡ ಒಮ್ಮೆನೂ ಸಂಸತ್‌ನಲ್ಲಿ ಬಂದಿಲ್ಲ. ಬಿಜೆಪಿ ಅಭ್ಯರ್ಥಿ ಆರು ಬಾರಿ ಶಾಸಕರಾದರೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಬಗ್ಗೆ ಒಮ್ಮೆಯೂ ಯೋಚಿಸಿಲ್ಲ. ಜೀವಮಾನದಲ್ಲಿ ಬಿಜೆಪಿಗರು ಸುಳ್ಳು ಹೇಳುವುದನ್ನ ಬಿಟ್ಟರೆ ಮಾಡಿದ್ದೇನಿಲ್ಲ. ರಾಜಕಾರಣ ಮಾಡಲು ಕೂಡ ಅವರಿಗೆ ಹೆಣ ಬೇಕು. ಮೋದಿಗೆ ಮತ ಹಾಕಿ ಎನ್ನುತ್ತಾರೆ, ೧೦ ವರ್ಷಗಳಲ್ಲಿ ಅವರು ಮಾಡಿದ್ದೇನಿದೆ? ಎಂದು ಪ್ರಶ್ನಿಸಿದರು.

300x250 AD

ಹೆದ್ದಾರಿ ಕಾಮಗಾರಿ ಆರಂಭವಾಗಿ ೧೦ ವರ್ಷ ಕಳೆಯಿತು‌. ಸಾವಿರಾರು ಜನ ಸತ್ತರೂ ಒಂದೇ ಒಂದು ದಿನ ಹೆದ್ದಾರಿ ಕಾಮಗಾರಿ ಬಗ್ಗೆ ಬಿಜೆಪಿಗರು ಮಾತನಾಡಿಲ್ಲ. ಕಾರಣ ಹೆದ್ದಾರಿ ಗುತ್ತಿಗೆ ಕಂಪನಿ ಅವರದ್ದೇ ಸಚಿವರದ್ದು. ಆದರೆ ಅವರಿಗೆ ಯಾರದ್ದಾದರು ಸಾವಾದರೆ ಅದನ್ನ ರಾಜಕೀಯಕ್ಕೆ ಬಳಸಿಕೊಳ್ಳಲು ಹಾತೊರೆಯುತ್ತಾರೆ ಎಂದರು.

ಈ ಸಂದರ್ಭದಲ್ಲಿ ಡಾ.ಅಂಜಲಿ ಅವರಿಗೆ ಸ್ಥಳೀಯ ಮಹಿಳೆಯರು ಉಡಿ ತುಂಬುವ ಮೂಲಕ ಗೌರವ ಅರ್ಪಣೆ ಮಾಡಿದರು.

ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ‌ ಗಾಂವ್ಕರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ, ಜಿಲ್ಲಾ ಗ್ಯಾರಂಟಿ ಅನುಷ್ಠಾ‌ನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷ ಹೊನ್ನಪ್ಪ ನಾಯ್ಕ, ಮಹಿಳಾ ಕಾಂಗ್ರೆಸ್‌ನ ಪುಷ್ಪಾ ಮಹೇಶ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಬ್ದುಲ್ ಮಜೀದ್, ಕೆಪಿಸಿಸಿ ವೀಕ್ಷಕ ಅನಂತು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ತೆಂಗೇರಿ ಮುಂತಾದವರಿದ್ದರು.

ಕೋಟ್…
ನುಡಿದಂತೆ ನಡೆದಿದ್ದೇವೆ. ಸುಳ್ಳು ಹೇಳುವುದು ನಮ್ಮ ಜಾಯಮಾನವಲ್ಲ. ಸಮರ್ಥ ಅಭ್ಯರ್ಥಿ, ಜೊತೆಗೆ ನಿಲ್ಲುವ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಆಶೀರ್ವಾದ ಮಾಡಿದರೆ ಸಂಸತ್‌ನಲ್ಲಿ ಜಿಲ್ಲೆಯ ದನಿಯಾಗಲಿದ್ದಾರೆ.

  • ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ
Share This
300x250 AD
300x250 AD
300x250 AD
Back to top