ಶಿರಸಿ: ಯಲ್ಲಾಪುರ ತಾಲೂಕು ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ 1970-71 ನೇ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಂದ `ಸಹಪಾಠಿ ಸ್ನೇಹಿತರ ಸ್ನೇಹಕೂಟ-ಗೌರವಾರ್ಪಣೆ-ದೇಣಿಗೆ ಸಮರ್ಪಣೆ’ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಬಾರ್ಡನ ನಿವೃತ್ತ ಜನರಲ್ ಮ್ಯಾನೇಜರ್ ಡಾ||ಆರ್.ಎನ್. ಹೆಗಡೆ ಭಂಡೀಮನೆ ಮಾತನಾಡಿ, ನಮ್ಮ ವ್ಯಕ್ತಿತ್ವ ರೂಪಿಸಿ ನಮ್ಮ ಬದುಕಿಗೊಂದು ಅರ್ಥ ಕಲ್ಪಿಸುವವರು ಶಾಲೆಯ ಅಧ್ಯಾಪಕರುಗಳು .ಜೀವನಕ್ಕೆ ಮಾರ್ಗದರ್ಶನವಿತ್ತ ಪೂಜ್ಯರನ್ನು ಗೌರವಿಸುವುದು ಮತ್ತು ಆ ಜ್ಞಾನದೇಗುಲವನ್ನು ಬೆಳೆಸುವುದು ತುಂಬಾ ಹೆಮ್ಮೆಯ ಕೆಲಸ .ಕಾರಣ ಇಂತಹ ಆದರ್ಶ ಕಾರ್ಯಕ್ರಮಗಳು ಎಲ್ಲೆಡೆ ಜರುಗುವಂತಾಗಲಿ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಎನ್.ಶಾಸ್ತ್ರಿ ಜೋಗಭಟ್ರಕೇರಿ ಸಾಂದರ್ಭಿಕ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗುರುಪ್ರಸಾದ ಭಟ್ಟ ಹೊನ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು.ಈ ಸಮಾರಂಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಎಲ್.ಶಾಸ್ತ್ರಿ ಗೊಣಸರಮನೆ, ಜಿ.ಟಿ.ಭಟ್ ಬೊಮ್ನಳ್ಳಿ, ವಿ.ಜಿ.ಭಟ್ಟ ಚವತ್ತಿ ಹಾಗೂ ನಿವೃತ್ತ ಗ್ರಂಥಾಲಯ ಸಹಾಯಕ ಐ.ಐ.ಶೇಖ್ ರವರಿಗೆ ಗುರುವಂದನೆ,ಗೌರವ ಸನ್ಮಾನ ನೆರವೇರಿಸಲಾಯಿತು. ಸನ್ಮಾನಿತರು ತಮ್ಮ ಆಶೀರ್ವಾದ ನುಡಿಗಳನ್ನಾಡಿದರು. ಸಹಪಾಠಿಗಳೆಲ್ಲ ಸೇರಿ ಶಾಲೆಯ ಅಭಿವೃದ್ಧಿಗಾಗಿ ದೇಣಿಗೆಯನ್ನು ಸಮರ್ಪಿಸಿದರು.
ಸಾಮಾಜಿಕ ಮುಂದಾಳು ಸೂರ್ಯನಾರಾಯಣ ಭಟ್ಟ ಮಾಳಕೊಪ್ಪ ಸ್ವಾಗತಿಸಿದರೆ ಈ ಕಾರ್ಯಕ್ರಮದ ಮುಖ್ಯ ಆಯೋಜಕರಾದ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎನ್.ಹೆಗಡೆ ಭಂಡಿಮನೆ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.