ದಾಂಡೇಲಿ : ಅಗಲಿದ ಮಾಜಿ ಜಿಲ್ಲಾಧಿಕಾರಿ, ಚಲನಚಿತ್ರ ನಟ ಹಾಗೂ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರಾದ ಕೆ.ಶಿವರಾಮ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ಎಂಪ್ಲಾಯಿಸ್ ಯೂನಿಯನಿನ ರಾಷ್ಟ್ರೀಯ ಉಪಾಧ್ಯಕ್ಷರಾದ ಐ.ಪಿ.ಘಟಕಾಂಬಳೆ ಅವರಿಗೆ ನಗರದ ಛಲವಾದಿ ಮಹಾಸಭಾದ ವತಿಯಿಂದ ಹಳೆ ನಗರಸಭೆಯ ಕೊಠಡಿಯಲ್ಲಿ ನುಡಿ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಕೆ.ಶಿವರಾಮ್ ಮತ್ತು ಐ.ಪಿ.ಘಟಕಾಂಬಳೆ ಅವರ ಭಾವಚಿತ್ರಕ್ಕೆ ಪುಷ್ಪ ಗೌರವವನ್ನು ಸಲ್ಲಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿಗಳಾದ ಅಜನಾಳ ಭೀಮಶಂಕರ್ ಮತ್ತು ಛಲವಾದಿ ಮಹಾಸಭಾದ ಪ್ರಮುಖರಾದ ಗೋವಿಂದ ಮೇಲಗೇರಿ ಅವರು ಕೆ.ಶಿವರಾಮ್ ಅವರು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿ ಜನಪ್ರೀತಿಯನ್ನು ಗಳಿಸಿದ್ದರು. ಚಲನಚಿತ್ರ ನಟರಾಗಿಯೂ ಅತ್ಯುತ್ತಮ ಚಿತ್ರಗಳನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿದ್ದರು. ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರಾಗಿಯೂ ಅನುಪಮ ಸೇವೆಯನ್ನು ಸಲ್ಲಿಸಿದ್ದರು. ಜನಸೇವೆಗಾಗಿ ತನ್ನ ಬದುಕನ್ನು ಸಮರ್ಪಿಸಿಕೊಂಡಿದ್ದ ಆದರ್ಶ ವ್ಯಕ್ತಿಯಾಗಿ ನಮಗೆಲ್ಲರಿಗೂ ಪ್ರೇರಣಾದಾಯಿಯಾಗಿದ್ದರು ಎಂದರು. ಅಂತೆಯೆ ಐ.ಪಿ.ಘಟಕಾಂಬಳೆ ಅವರು ಸರಳ ಸಹೃದಯಿ ನಡವಳಿಕೆಯ ಮೂಲಕವೇ ಮನೆ ಮಾತಾಗಿದ್ದರು. ಸೇವಾ ಮನೋಭಾವನೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದ ಘಟಕಾಂಬಳೆಯವರು ಒಂದು ಶಕ್ತಿಯಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗೀತಾ ಸರನಾಯಕ್, ಅಪ್ಪ ಸಾಹೇಬ್ ಕಾಂಬಳೆ, ಭೀಮುಶಿ ಬಾದುರ್ಲಿ, ಶಿವಪ್ಪ ಸರನಾಯಕ್ ಮೊದಲಾದವರು ಉಪಸ್ಥಿತರಿದ್ದರು.