ಭಟ್ಕಳ: ಭಟ್ಕಳ ತೋಟಗಾರಿಕೆ ಇಲಾಖೆ ವತಿಯಿಂದ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಆಯೋಜಿಸಿದ್ದ ಜೇನು ಕೃಷಿ ತರಬೇತಿ ಶಿಬಿರವನ್ನು ಪತ್ರಕರ್ತ ಮೋಹನ ನಾಯ್ಕ ಮಂಗಳವಾರ ಉದ್ಘಾಟಿಸಿ, ಮಾತನಾಡಿ, ಗೃಹಣಿಯರಿಗೆ ಸ್ವಯಂ ಉದ್ಯೋಗ ನಡೆಸಲು ಇದೊಂದು ಸುವರ್ಣಾವಕಾಶವಾಗಿದೆ. ಸರ್ಕಾರದ ಸಹಾಯಧನದ ನೆರವಿನೊಂದಿಗೆ ಕಡಿಮೆ ಬಂಡವಾಳದಲ್ಲಿ ಮನೆಯಲ್ಲಿಯೇ ಜೇನು ಸಾಕಾಣಿಕೆ ಮಾಡಿ ಕೈತುಂಬ ಆದಾಯ ಗಳಿಸಲು ಸಾಧ್ಯವಿದೆ. ಇಂದಿನ ಕಲಬೆರೆಕೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನು ತಿಂದು ಆರೋಗ್ಯ ಹಾಳುಮಾಡಿಕೊಳ್ಳದ ಜನರು ನೈಸರ್ಗಕವಾಗಿ ಸಿಗುವಂತಹ ಇಂತಹ ವಸ್ತುಗಳಿಗೆ ಹೆಚ್ಚೂ ಬೆಲೆಯಾದರೂ ಹುಡುಕಿ ಕೊಂಡೊಯ್ಯುತ್ತಾರೆ. ಜೇನು ಸಾಕಾಣಿಕೆಗೆ ಸೂಕ್ತ ತರಬೇತಿ ಹಾಗೂ ಆಸಕ್ತಿ ಅಗತ್ಯ ಎಂದರು. ತಂಜಿಮ್ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿ ಸರ್ಕಾರ ಇಂತಹ ಹಲವಾರು ಯೋಜನೆಗಳ ಸದುಪಯೋಗವನ್ನು ಮುಸ್ಲಿಂ ಮಹಿಳೆಯರು ಪಡೆದುಕೊಳ್ಳಬೇಕು ಎಂದರು. ಜಾಲಿ ಪ.ಪಂ ಸದಸ್ಯ ಮುನೀರ ಅಹ್ಮದ ಮಾತನಾಡಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆಗಾಗಿ ಹಲವಾರು ಯೋಜನೆಗಳಿದ್ದು ಸಾರ್ವಜನಿಕರು ಆಗಾಗ ಈ ಕಛೇರಿಗಳಿಗೆ ಭೇಟಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಹಿರಿಯ ತೋಟಗಾರಿಕೆ ನಿರ್ದೇಶಕ ಕೆ.ಎಚ್.ಬಿಳಗಿ ಮಾತನಾಡಿ ಜೇನು ಕೃಷಿ ಸಾಕಾಣಿಕೆಯ ಯೋಜನೆಯ ಮಾಹಿತಿ ನೀಡಿದರು. ಜೇನು ಬೇಸಾಯ ತಜ್ಞ ಮುಮ್ತಾಜ ಅಲಿ ಜೇನು ಸಾಕಾಣಿಕೆಯ ಸಂಪೂರ್ಣ ತರಬೇತಿ ನೀಡಿದರು.