ಯಲ್ಲಾಪುರ: ಪಟ್ಟಣದ ತಹಸೀಲ್ದಾರ ಕಚೇರಿ ಭೂಮಾಪನ ವಿಭಾಗದ ಪರವಾನಗಿ ಭೂಮಾಪಕರೊಬ್ಬರು ಬುಧವಾರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಪರವಾನಗಿ ಭೂಮಾಪಕ ಚಂದ್ರಮೋಹನ ನಾರಾಯಣಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಮಂಚಿಕೇರಿ ಹೋಬಳಿಯ ಹುಣಶೆಟ್ಟಿಕೊಪ್ಪದ ಸ.ನಂ 206 ರ 3 ಎಕರೆ 19 ಗುಂಟೆ ಕ್ಷೇತ್ರದ ಪೋಡಿ ಮಾಡಿಕೊಟ್ಟ ಕಾರಣಕ್ಕಾಗಿ ಧೀರಜ ತಿನೆಕರ್ ಅವರಲ್ಲಿ ರೂ. 2,500 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಧೀರಜ್ ಅವರಿಂದ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಅಧಿಕಾರಿಗಳು, ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್.ಪಿ ಕುಮಾರಚಂದ್ರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ವಿನಾಯಕ ಬಿಲ್ಲವ, ಸಿಬ್ಬಂದಿ ನಾರಾಯಣ ನಾಯ್ಕ, ಪ್ರದೀಪ ರಾಣೆ, ಮಹಮ್ಮದ್ ರಫೀಕ್, ಶ್ರೀಕೃಷ್ಣ ಬಾಳೆಗದ್ದೆ, ಶಿವಕುಮಾರ ನಾಯ್ಕ, ಗಜೇಂದ್ರ ಪೂಜಾರಿ, ಆನಂದ ರಾಮಾಪುರ, ಮಹೇಶ ನಾಯಕ, ಸಂಜೀವ ಗುರವ್, ಮಂಜುನಾಥ ಮಡಿವಾಳ, ಮೆಹಬೂಬ್ ಅಲಿ, ಸತೀಶ ಪಟಗಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಲೋಕಾಯುಕ್ತ ಎಸ್.ಪಿ ಕುಮಾರಚಂದ್ರ, ಭ್ರಷ್ಟಾಚಾರ ತಡೆಗಟ್ಟುವಲ್ಲಿ ಲೋಕಾಯುಕ್ತ ಶ್ರಮಿಸುತ್ತಿದ್ದು, ಅಧಿಕಾರಿಗಳು ಸಾರ್ವಜನಿಕ ಕೆಲಸಕ್ಕೆ ಲಂಚ ಕೇಳಿದಾಗ ನಮ್ಮಲ್ಲಿ ದೂರು ನೀಡಿ, ಅವರಿಗೆ ತಕ್ಕ ಶಿಕ್ಷೆ ನೀಡುವಂತೆ ಮಾಡಲು, ಭ್ರಷ್ಟಾಚಾರ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕೆಂದರು.