ಸಿದ್ದಾಪುರ; ತಾಲೂಕಿನ ಬಿಳಗಿಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಸ್ತುತ ಸಾಗರದಲ್ಲಿ ನೆಲೆಸಿದ್ದ ಮಾಧವ ರಾಮಚಂದ್ರ ಪೈ ಕೋಡಿಗದ್ದೆ(99) ಬುಧವಾರ ಬೆಳಿಗ್ಗೆ ಅಸ್ತಂಗತರಾಗಿದ್ದಾರೆ. ಇದರಿಂದಾಗಿ ಸಿದ್ದಾಪುರದ ಸ್ವಾತಂತ್ರ್ಯ ಯೋಧರ ಪಟ್ಟಿಯಲ್ಲಿ ಕೊನೆಯ ಕೊಂಡಿಯಾಗಿದ್ದ ಸಾರ್ಥಕ ಜೀವವೊಂದು ಕಣ್ಮರೆಯಾದಂತಾಗಿದೆ.
ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುಟಗಳಲ್ಲಿ “ಕಟ್ಟೆಕೈ ಗಾಂಧಿ” ಎಂದೇ ಹೆಸರಾದ, ಅಪ್ಪಟ ದೇಶಭಕ್ತ, ಬಿಳಗಿಯ ಸ್ವಾತಂತ್ರ್ಯ ಯೋಧ ಕೋಡಿಗದ್ದೆ ರಾಮಚಂದ್ರ ಪೈ ಹಾಗೂ ಸ್ವಾತಂತ್ರ್ಯ ಯೋಧೆ ಶ್ರೀಮತಿ ಫಂಡರೀಬಾಯಿ (ಸೀತಾಬಾಯಿ) ಅವರ ಎಂಟು ಮಕ್ಕಳಲ್ಲಿ ನಾಲ್ಕನೆಯವರಾಗಿ ಮಾಧವ ಪೈ ಫೇಬ್ರವರಿ 1926 ರಂದು ಜನಿಸಿದ್ದರು. “ಮಕ್ಕಳ ವಾನರ ಸೇನೆ”ಯ ಮೂಲಕ ಧ್ವಜವಂದನೆ ಮಾಡಿ “ವಂದೇ ಮಾತರಂ” ಹಾಡುವುದು, ಸಾರ್ವಜನಿಕರಿಂದ ಮಷ್ಟಿ ಫಂಡ್ ಸಂಗ್ರಹ, ಧನ ಸಂಗ್ರಹ ಮಾಡಿ ಗಾಂಧಿ ಫಂಡಿಗೆ ಹಾಗೂ ರಾಷ್ಟ್ರೀಯ ಶಾಲೆಗೆ ನೀಡುವಲ್ಲಿ ಮಾಧವ ಪೈ ಮುಂಚೂಣಿಯಲ್ಲಿದ್ದರು. ಬಾಲಕರಾಗಿದ್ದರೂ ಬ್ರಿಟಿಷರ ವಿರುದ್ಧ ಅಪ್ರತಿಮ ಹೋರಾಟ ನಡೆಸಿದ್ದ ಮಾಧವ ಪೈ ಅವರನ್ನು ಬ್ರಿಟಿಷ್ ಪೊಲೀಸರು ಒಟ್ಟೂ ನಾಲ್ಕು ಸಾರೆ ಬಂಧಿಸಿ ಶಿಕ್ಷಿ ವಿಧಿಸಿದ್ದರು. ಪ್ರತಿಸಾರಿಯೂ ಅಪ್ರಾಯಸ್ತನೆಂದು ಮಾಧವ ಪೈ ಅವರನ್ನು ಬಿಡುಗಡೆ ಮಾಡಲಾಗಿತ್ತು. ಸ್ವಾತಂತ್ರ್ಯ ಯೋಧರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡಮಾಡುತ್ತಿದ್ದ ಗೌರವ ಪಿಂಚಣಿಯನ್ನು ಮಾಧವ ಪೈ ಅವರು ನಿರಾಕರಿಸಿ ತಮ್ಮ ಅಪ್ಪಟ ದೇಶಪ್ರೇಮ ಮೆರೆದಿದ್ದರು. 2023 ರ ಆಗಸ್ಟ 14 ರಂದು ಸಿದ್ದಾಪುರದ ಅನೇಕ ಸಂಘಟನೆಗಳು ಸಾಗರದ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಮಾಧವ ಪೈ ಅವರನ್ನು ಗೌರವಿಸಿ ಸಂಮಾನಿಸಿದ್ದವು. ಮಾಧವ ಪೈ ಅವರು ಎರಡು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನು ಅಪಾರ ಬಂಧು ಬಳಗವನ್ನೂ ಅಗಲಿದ್ದಾರೆ. ಮಾಧವ ಪೈ ಅವರ ನಿಧನಕ್ಕೆ ಹಿರಿಯ ಇತಿಹಾಸಕಾರ ಪದ್ಮಾಕರ ಮಡಗಾಂವಕರ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಗರದ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಧವ ಪೈ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ.