ಶಿರಸಿ: ಯಲ್ಲಾಪುರ ನಂದೋಳ್ಳಿಯ ರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಗಂಗಾಸಮಾರಾಧನೆ ಪ್ರಯುಕ್ತ ಏರ್ಪಡಿಸಲಾಗಿದ್ದ ಗಾನವೈಭವ ಜನಮನ ತಣಿಸುವಲ್ಲಿ ಯಶಸ್ವಿಯಾಗಿದೆ.
ನಂದೋಳ್ಳಿಯ ಜಾನಕಿ ಮತ್ರು ರಾಮಚಂದ್ರ ಕುಲಕರ್ಣಿ ದಂಪತಿಯವರು, ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ಸಹಕಾರದೊಂದಿಗೆ ಯಕ್ಷಾಭಿಮಾನಿಗಳಿಗಾಗಿ ಗಾನವೈಭವ ಏರ್ಪಸಿದ್ದು, ಪುರೋಹಿತ ವಿ.ಶಿವರಾಮ ಭಟ್ಟ ಸುಳಗಾರ ಉದ್ಘಾಟಿಸಿ, ಮಾತನಾಡಿ, ಸಂಪ್ರದಾಯ ಹಾಗೂ ಸಂಸ್ಕಾರಗಳು ಅನಾಧಿಯಿಂದಲೂ ನಡೆದುಕೊಂಡು ಬಂದಿದ್ದು, ವೇದಗಳ ಕಾಲದಿಂದಲೂ ಅದಕ್ಕೆ ಮಹತ್ವವಿದೆ. ಯಕ್ಷಗಾನವು ಒಂದು ಶ್ರೇಷ್ಠ ಕಲೆಯಾಗಿದ್ದು, ಅದರಲ್ಲೂ ಪೌರಾಣಿಕ ಸಂಬಂಧಪಟ್ಟ ಹಾಡುಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಮತ್ತು ಅರ್ಥಪೂರ್ಣವಾಗಿದೆ. ಯಕ್ಷ ಹಾಡುಗಳೇ ಅಂದಿನ ಸನ್ನಿವೇಶವನ್ನು ಸ್ಮರಣಿಯಲ್ಲಿ ಬರುವಂತೆ ಮಾಡುತ್ತದೆ ಎಂದರು.
ವೇದಿಕೆಯಲ್ಲಿ ನಂದೋಳ್ಳಿ ಗ್ರಾಪಂ ಅಧ್ಯಕ್ಷ ನರಸಿಂಹ ಕೊಣೇಮನೆ ಉಪಸ್ಥಿತರಿದ್ದರು. ನಂತರ ನಡೆದ ಗಾನ ವೈಭವದಲ್ಲಿ ಹಿಲ್ಲೂರು ಯಕ್ಷಮಿತ್ರ ಬಳಗದ ಮುಖ್ಯಸ್ಥ ಹಾಗೂ ಜನಪ್ರಿಯ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಮತ್ತು ಹಿರಿಯ ಭಾಗ್ವತ್ ಶ್ರೀಪಾದ ಹೆಗಡೆ ಬಾಳೆಗದ್ದೆ ಆಯ್ದ ಪೌರಾಣಿಕ ಪ್ರಸಂಗದ ಹಾಡುಗಳನ್ನು ಸುಂದರವಾಗಿ ಹಾಡಿ ಪ್ರೇಕ್ಷಕರ ಕರತಾಡನಕ್ಕೆ ಭಾಜನರಾದರು.
ಮದ್ದಲೆ ವಾದನದಲ್ಲಿ ನರಸಿಂಹ ಭಟ್ಟ ಹಂಡ್ರೆಮನೆ, ಚಂಡೆ ವಾದನದಲ್ಲಿ ಗಣೇಶ ಗಾಂವ್ಕರ ಹಲವಳ್ಳಿ ಸಮರ್ಥವಾಗಿ ಸಾಥ್ ನೀಡಿದರು.
ಗಾನ ವೈಭವದ ಕೊನೆಯಲ್ಲಿ ಹಿಲ್ಲೂರು ಭಾಗವರು ಪ್ರಸ್ತುತ ಅಯೋಧ್ಯಾ ರಾಮ ಮಂದಿರ ಕುರಿತಾಗಿ ಪವನ ಕಿರಣಕೆರೆ ವಿರಚಿತ ರಾಮನಾಮನ ಪದ್ಯ ಹಾಡಿದಾಗ, ಇಡಿ ಸಭೆ ರಾಮನಾಮ ಜಪಿಸಿದ್ದು ವಿಶೇಷತೆ. ಹಿಲ್ಲೂರು ಭಾಗವರು ಇನ್ನುಳಿದ ಕಲಾವಿದರನ್ನು ಗೌರವಿಸಿದರು. ಗಿರಿಧರ ಕಬ್ನಳ್ಳಿ ಸ್ಬಾಗತಿಸಿ, ನಿರೂಪಿಸಿದರು. ರಮ್ಯಾ ರಾಮಕೃಷ್ಣ ವಂದಿಸಿದರು.