ಭಟ್ಕಳ; ತಾಲೂಕಿನ ಅತೀ ಪ್ರಸಿದ್ಧವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆ ಜನವರಿ 23ರಂದು ಆರಂಭವಾಗಿ ಜ.31ರವರೆಗೆ ನಡೆಯಲಿದ್ದು ರಾಜ್ಯದಾದ್ಯಂತ ಭಕ್ತರನ್ನು ಹೊಂದಿರುವ ದೇವಿಯ ದರ್ಶನ ಪಡೆದು ಕೃತಾರ್ಥರಾಗುವಂತೆ ಆಡಳಿತ ಕಮಿಟಿಯ ಅಧ್ಯಕ್ಷ ಭಾಸ್ಕರ ಮೊಗೇರ ವಿನಂತಿಸಿದ್ದಾರೆ.
ಪ್ರತಿವರ್ಷ ಜನವರಿ ತಿಂಗಳಿನಲ್ಲಿ 23ರಂದು ಆರಂಭವಾಗುವ ಜಾತ್ರೆಯಲ್ಲಿ ಮೊದಲ ದಿನ ಹಾಲ ಹಬ್ಬ, ಎರಡನೇ ದಿನ ಕೆಂಡ ಸೇವೆ ಹಾಗೂ ನಂತರದ ದಿನಗಳಲ್ಲಿ ತುಲಾಭಾರ ಸೇವೆಯು ಅತ್ಯಂತ ವಿಶೇಷವಾಗಿದೆ. ಸೋಡಿಗದ್ದೆ ಶ್ರೀ ಮಹಾಸತಿ ದೇವಿಯೂ ಅಸಂಖ್ಯಾತ ಭಕ್ತರನ್ನು ಹೊಂದಿದ್ದು, ಜಾತ್ರೆಯಲ್ಲಿ ದೇವರಿಗೆ ಗೊಂಬೆಗಳನ್ನು ಅರ್ಪಿಸುವುದು ಪ್ರಮುಖ ಹರಿಕೆಗಳಲ್ಲಿ ಒಂದು. ಗೊಂಬೆಗಳಲ್ಲಿಯೂ ಕೂಡಾ ಮೂರು ಗಾತ್ರದ ಗೊಂಬೆಗಳನ್ನು ಅರ್ಪಿಸಲಾಗುತ್ತಿದ್ದು ಭಕ್ತರು ತಮ್ಮ ತಮ್ಮ ಶಕ್ತ್ಯಾನುಸಾರ ಹರಕೆಯ ಗೊಂಬೆಗಳನ್ನು ನೀಡುತ್ತಾರೆ. ಗೊಂಬೆಗಳಲ್ಲಿ ಮಹಾಸತಿ, ಜಟ್ಟಿಗರಾಯ, ಮರದ ಹುಲಿರಾಯ, ನಾಗರಕಲ್ಲು, ಹಾಯ್ ಗೂಳಿ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಸಲ್ಲಿಸಲಾಗುತ್ತಿದೆ. ಗೊಂಬೆಗಳ ಹರಕೆ ಒಂದು ವಿಧವಾದರೆ ಕೆಂಡ ಕಾಣಿಕೆ, ತುಲಾಭಾರ, ಬಲಿ ಸಮರ್ಪಣೆ, ಹೂವಿನಪೂಜೆ ಮತ್ತೊಂದು ರೀತಿಯ ಹರಕೆಯಾಗಿದೆ. ಆದರೆ ಇಲ್ಲಿ ಗೊಂಬೆ ಹರಕೆಯೇ ಪ್ರಸಿದ್ದಿಯಾಗಿದ್ದು ಶಕ್ತ್ಯಾನುಸಾರ ಗೊಂಬೆ ಕಾಣಿಕೆ ನೀಡುವುದು ವಿಶೇಷವಾಗಿದೆ.
ಪ್ರತಿ ನಿತ್ಯ ಭಕ್ತರು ಹೂವಿನ ಪೂಜೆ, ತೊಟ್ಟಿಲು ಸಮರ್ಪಣೆ, ಕಣ್ಣು, ಇತ್ಯಾದಿಗಳನ್ನು ಸಮರ್ಪಿಸಿ ತಮ್ಮ ಹರಿಕೆಯನ್ನು ತೀರಿಸುತ್ತಾರೆ. ಕಷ್ಟದಲ್ಲಿದ್ದಾಗ ಹರಿಕೆ ಹೇಳಿಕೊಂಡು ಅವುಗಳನ್ನು ಜಾತ್ರೆಯ ಸಂದರ್ಭದಲ್ಲಿ ತೀರಿಸುವುದರಿಂದ ದೇವಿ ಸಂತುಷ್ಟಳಾಗಿ ತಮ್ಮ ಹರಿಕೆ ಒಪ್ಪಿಕೊಳ್ಳುತ್ತಾಳೆನ್ನುವದು ಭಕ್ತರ ನಂಬಿಕೆಯಾಗಿದೆ. ಜನವರಿ 23ರಂದು ಹಾಲಹಬ್ಬ, 24ಕ್ಕೆ ಕೆಂಡ ಸೇವೆ, 25ರಿಂದ 27ರವರೆಗೆ ತುಲಾಬಾರ ಸೇವೆ ನಡೆಯಲಿದೆ. ಊರ ಮತ್ತು ಪರಊರ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಲಿದ್ದಾರೆ. ಜಾತ್ರೆಯ ಸಮಯದಲ್ಲಿ ಪ್ರತಿದಿನ ಅನ್ನಸಂತರ್ಪಣೆ ಸೇವೆ ನಡೆಯಲಿದ್ದು, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಎಂದು ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಆಡಳಿತ ಕಮಿಟಿಯ ಲಕ್ಷ್ಮೀ ನಾರಾಯಣ ನಾಯ್ಕ, ದೇವಾನಂದ ಮೊಗೇರ, ನಾಗರಾಜ ನಾಯ್ಕ, ಗೋವಿಂದ ನಾಯ್ಕ, ರಮೇಶ ದೇವಾಡಿಗ, ತಿಮ್ನಪ್ಪ ನಾಯ್ಕ, ಮಾದೇವ ನಾಯ್ಕ, ರಘು ನಾಯ್ಕ, ದಿವಾಕರ ಮೊಗೇರ ಇತರರು ಇದ್ದರು.