ಜೋಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಅವರ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸುವಂತೆ ಪಾಲಕರು ಮತ್ತು ಮಕ್ಕಳು ಸೇರಿ ಮಕ್ಕಳೆಲ್ಲರು ಶಾಲೆಗೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಎಸ್.ಡಿ.ಎಮ್,ಸಿ.ಅಧ್ಯಕ್ಷ ರಾಜು ವೆಳಿಪ್, ಕಳೆದ ಹಲವಾರು ತಿಂಗಳುಗಳಿಂದ ನಮ್ಮ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿಲ್ಲ. 31 ಮಕ್ಕಳಿರುವ ನಮ್ಮ ಶಾಲೆಗೆ ಒಬ್ಬರು ಖಾಯಂ ಶಿಕ್ಷಕರಿಲ್ಲ, ಕಳೆದ 3 ತಿಂಗಳ ಹಿಂದೆಯೇ ಶಿಕ್ಷಣ ಇಲಾಕೆಗೆ ಮನವಿ ನೀಡಲಾಗಿತ್ತು, ಜಿಲ್ಲಾಧಿಕಾರಿಗಳಿಗೆ, ಎ,ಸಿ ,ತಹಶಿಲ್ದಾರರಿಗೆ ಮನವಿ ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ, ನಮ್ಮ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸುವವರೆಗೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ, ಕೆಲ ಶಾಲೆಗಳಲ್ಲಿ ಐದಾರು ಸರ್ಕಾರಿ ಶಿಕ್ಷಕರು ಇದ್ದಾರೆ. ಅಂತಹ ಶಾಲೆಗಳ ಒಂದು ಶಿಕ್ಷಕರನ್ನು ನಮ್ಮ ಶಾಲೆಗೆ ಕೊಡಬಹುದಲ್ಲ, ಶಿಕ್ಷಣ ಇಲಾಖೆಗೆ ನಮ್ಮ ಶಾಲೆಯ ಬಗ್ಗೆ ಕಾಳಜಿ ಇಲ್ಲ, ಚುನಾಯಿತ ಪ್ರತಿನಿಧಿಗಳು, ಶಾಸಕರು ಈ ಬಗ್ಗೆ ಗಮನಹರಿಸಿ ನಮ್ಮ ಶಾಲೆಗೆ ಶಿಕ್ಷಕರನ್ನು ನೀಡಿ ಎಂದರು.
ಶಾಲಾ ಮಕ್ಕಳು, ನಮಗೆ ಶಿಕ್ಷಕರನ್ನು ನೀಡಿ ನಮ್ಮ ಶಿಕ್ಷಣವನ್ನು ಉಳಿಸಿ,ಕಸಿದುಕೊಳ್ಳಬೇಡಿ ಎಂದು ವಿನಂತಿಸಿದರು. ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹಮದ್ ಶೇಖ್ ಸ್ಥಳಕ್ಕೆ ಆಗಮಿಸಿ ನಾವು ಸಧ್ಯ ಅತಿಥಿ ಶಿಕ್ಷಕರನ್ನು ಮಾತ್ರ ನೇಮಿಸಲು ಸಾಧ್ಯ ,ಸರ್ಕಾರದ ಆದೇಶ
ಬರುವ ತನಕ ಖಾಯಂ ಶಿಕ್ಷಕರನ್ನು ನೇಮಿಸಲು ಆಗುವುದಿಲ್ಲ ಎಂದು ಪಾಲಕರಿಗೆ ತಿಳಿಸಿದರು.
ಮೊದಲೇ ಹಿಂದುಳಿದ ತಾಲೂಕು ಜೋಯಿಡಾದಲ್ಲಿ ಶಿಕ್ಷಣ ಕಡಿಮೆ. ಹೀಗಿರುವಾಗ ಶಿಕ್ಷಣ ಇಲಾಖೆಯವರು ಅತಿಥಿ ಶಿಕ್ಷಕರನ್ನು ಬಿಟ್ಟು ಎರಡು ಅಥವಾ ಮೂರು ಶಿಕ್ಷಕರು ಇರುವಂತಹ ಶಾಲೆಯ ಶಿಕ್ಷಕರನ್ನು ಇಲ್ಲಿಗೆ ತಾತ್ಕಾಲಿಕವಾಗಿ ನೇಮಿಸಿ ಸಮಸ್ಯೆ ಬಗೆಹರಿಸಬಹುದಾಗಿತ್ತು ಎನ್ನುವುದು ಜೋಯಿಡಾ ಸಾರ್ವಜನಿಕರ ಮಾತಾಗಿದೆ. ಅದೆನೆ ಇರಲಿ ಶಿಕ್ಷಣದ ವಿಚಾರದಲ್ಲಿ ಶಿಕ್ಷಣ ಇಲಾಖೆ ಮಕ್ಕಳ ಜೊತೆ ಚೆಲ್ಲಾಟವಾಡದೆ ಕೂಡಲೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕೆ ವಿನ: ಹಳ್ಳಿ ಜನ ಹೇಗೆ ಮಾಡಿದರು ಸುಮ್ಮನ್ನಿರುತ್ತಾರೆ ಎಂಬ ಅತಿ ಬುದ್ದಿವಂತಿಕೆ ತೋರಿಸದೇ ಶಿಕ್ಷಕರನ್ನು ನಿಯೋಜನೆ ಮಾಡುವಲ್ಲಿ ಬುದ್ದಿವಂತಿಕೆ ತೋರಿಸಬೇಕಿದೆ.