ಸಿದ್ದಾಪುರ: ಮನುಷ್ಯನಿಗೆ ಎರಡು ಶರೀರವೆನ್ನಲಾಗಿದೆ. ಭೌತಿಕವಾಗಿ ದೇಹವಾದರೆ ಭಾವವಾಗಿ ಮತ್ತೊಂದು ಶರೀರವಿರುತ್ತದೆ. ದೇಹದ ವೈದ್ಯರಾಗಿ, ಭಾವದ ವೈದ್ಯರಾಗಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸಿದವರು ಪಂ.ಮೋಹನ ಹೆಗಡೆ ಹುಣಸೇಕೊಪ್ಪ ಅವರು ಎಂದು ಸಾಹಿತಿ, ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಹೇಳಿದರು.
ಸಂಗೀತ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆಸಲ್ಲಿಸುತ್ತಿರುವ ಪಂಡಿತ ಮೋಹನ ಹೆಗಡೆ ಹುಣಸೆಕೊಪ್ಪ ಅವರಿಗೆ ಅವರ ಶಿಷ್ಯವೃಂದ ಹಾಗೂ ಅಭಿಮಾನಿಗಳಿಂದ ರವಿವಾರ ಸಂಘಟಿಸಿದ್ದ ಮನಮೋಹನ ಸಂಗೀತ ಕಾರ್ಯಕ್ರಮ ಮತ್ತು ಸತ್ಕಾರ ಸಮಾರಂಭದಲ್ಲಿ ಅವರು ಅಭಿನಂದನಾ ನುಡಿಗಳನ್ನಾಡಿದರು. ಉತ್ತಮ ಸಂಗೀತ ಕರುಳಿನ ಒಳಗೆ ಸುಖದಾಯಕ ಅನುಭವ ಸೃಷ್ಟಿಸುತ್ತದೆ. ಸಂಗೀತದ ತತ್ವಜ್ಞಾನ ಅರ್ಥೈಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಯಶಸ್ವಿಯಾದ ಪಂ.ಮೋಹನ ಹೆಗಡೆಯವರು ಬದುಕಿನ ಹೆಜ್ಜೆ ಹೆಜ್ಜೆಯಲ್ಲಿಯೂ ಶಿಸ್ತು-ಲೆಕ್ಕಾಚಾರವನ್ನು ಅಳವಡಿಸಿಕೊಂಡವರು. ತಮ್ಮ ಕಷ್ಟ ನಷ್ಟಗಳ ಸಂದರ್ಭದಲ್ಲಿಯೂ ಸಂತಸವನ್ನೇ ಹಂಚಿದವರು. ಇಂತವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಶಿಷ್ಯರು, ಅಭಿಮಾನಿಗಳು ತಮ್ಮ ಕರ್ತವ್ಯ ನಿರ್ವಹಿಸಿದಂತಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಖ್ಯಾತ ಗಾಯಕ ಪಂ.ಎಂ.ಪಿ.ಹೆಗಡೆ ಪಡಿಗೆರೆ, ವಿಶ್ರಾಂತ ಪ್ರಾಚಾರ್ಯ ಆರ್.ಎಸ್.ಹೆಗಡೆ ಬೆಳ್ಳೆಕೇರಿ, ರವೀಂದ್ರ ಪ್ರಕಾಶನದ ವೈ.ಎ.ದಂತಿ ಸಾಗರ, ವಿಶ್ರಾಂತ ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ ಮಗೇಗಾರು, ತಬಲಾ ಶಿಕ್ಷಕ ಪಂ.ಭಾಸ್ಕರ ಹೆಗಡೆ ಮುತ್ತಿಗೆ ಪಾಲ್ಗೊಂಡಿದ್ದರು.
ಸನ್ಮಾನ ಸ್ವೀಕರಿಸಿದ ಪಂ.ಮೋಹನ ಹೆಗಡೆ ಮಾತನಾಡಿ ಜೀವನದಲ್ಲಿ ಮಹಾದೊಡ್ಡದನ್ನೇನೂ ಮಾಡಿಲ್ಲ. ನಮ್ಮ ಜೀವನ ದೋಣಿ ತೇಲುತ್ತಿದೆ, ಅದನ್ನು ಮುನ್ನಡೆಸಲು ಹುಟ್ಟು ಹಾಕುತ್ತಿದ್ದೇವೆ. ನನ್ನ ಗುರುಹಿರಿಯರು ಸಜ್ಜನರಾಗಿ ಎಂದು ನನಗೆ ಪಾಠ ಮಾಡಿದರು. ಅದೇ ರೀತಿ ನಾನು ನನ್ನ ಶಿಷ್ಯರಿಗೆ ಸಂಗೀತಕ್ಕಿಂತ ಮುಖ್ಯವಾಗಿ ಸಜ್ಜನಿಕೆಯ ಪಾಠ ಮಾಡಿದ್ದೇನೆ. ನೀವೆಲ್ಲರೂ ಸೇರಿ ತನು-ಮನ-ಧನ ನೀಡಿದ್ದೀರಿ. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ನೀವು ಕೊಟ್ಟಿರುವ ಪ್ರೀತಿ ಮಿಗಿಲಾದುದು ಎಂದು ಕೃತಜ್ಞತೆ ಸಲ್ಲಿಸಿದರು. ಪಂ.ಮೋಹನ ಹೆಗಡೆಯವರ ಧರ್ಮಪತ್ನಿ ಶ್ರೀಮತಿ ವರಲಕ್ಷ್ಮಿ ಹೆಗಡೆ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಂಕರಮಠದ ಧರ್ಮಾಧಿಕಾರಿಗಳು, ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರೂ ಆದ ದೊಡ್ಮನೆ ವಿಜಯ ಹೆಗಡೆ ಮಾತನಾಡಿ ನಮ್ಮ ಹುಟ್ಟಿನಿಂದ ಮರಣದವರೆಗೂ ಸಮಾಜದ ಋಣ ನಮ್ಮ ಮೇಲಿರುತ್ತದೆ. ಈ ಋಣ ತೀರಿಸಲು ಸಮಾಜಕ್ಕೆ ಕೊಡುಗೆ ನೀಡಿದವರನ್ನು ಗೌರವಿಸಲು ಮರೆಯಬಾರದು. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಚಾರ ಪ್ರಸಿದ್ಧಿ ಬಯಸದೆ ಸಂಗೀತ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು, ಶಿಷ್ಯವೃಂದದವರನ್ನು ಹೊಂದಿರುವ ಪಂ.ಮೋಹನ ಹೆಗಡೆಯವರನ್ನು ಐದು ಲಕ್ಷ ರೂ.ಗಳ ಹಮ್ಮಿಣಿಯೊಂದಿಗೆ ಗೌರವಿಸಿ ಸತ್ಕರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗಾನಕಲಾವೃಂದ ಸಂಘಟನೆಯ ವತಿಯಿಂದ ಆರ್.ಎಸ್.ಹೆಗಡೆ ಬೆಳ್ಳೇಕೇರಿ, ಸುಬ್ಬರಾವ್ ಸಾಗರ, ಡಾ.ವಿ.ಎನ್.ಹೆಗಡೆ, ಆರ್.ಎನ್.ಭಟ್ಟ ಸುಗಾವಿ, ಮಂಜುನಾಥ ಭಟ್ಟ ನೆಬ್ಬೂರ, ಉದಯರಾಜ ಕರ್ಪೂರ, ರೇಖಾ ನರೇಂದ್ರ ಹೊಂಡಗಾಶಿ, ಪಂ.ಎಂ.ಪಿ.ಹೆಗಡೆ ಪಡಿಗೆರೆ ಅವರುಗಳು ಪಂ.ಮೋಹನ ಹೆಗಡೆ ದಂಪತಿಗಳನ್ನು ವೈಯಕ್ತಿಕವಾಗಿ ಗೌರವಿಸಿದರು. ವಿ.ಶೇಷಗಿರಿ ಭಟ್ಟ ಗುಂಜಗೋಡ ಅವರ ವೇದಸ್ತುತಿ, ಸ್ವಾಗತ, ಪ್ರಾಸ್ತಾವಿಕದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪಂ.ಮೋಹನ ಹೆಗಡೆ ದಂಪತಿಗಳು ಶ್ರೀಮತಿ ಉಮಾ ಕಮಲಾಕರ ಭಟ್ಟ ಕೆರೇಕೈ ಅವರಿಗೆ ಗೌರವಾರ್ಪಣೆ ಮಾಡಿದರು. ಪ್ರೊ.ಎಂ.ಕೆ.ನಾಯ್ಕ ನಿರ್ವಹಿಸಿದರು. ಅಭಿನಂದನಾ ಸಮಿತಿಯ ಶ್ರೀಪಾದ ಹೆಗಡೆ ಸೋಮನಮನೆ, ಕಿರಣ ಹೆಗಡೆ ಮಗೇಗಾರ, ಪ್ರಕಾಶ ಹೆಗಡೆ ಕಲ್ಲಾರೆಮನೆ ಸೇರಿದಂತೆ ನಾಡಿನ ವಿವಿಧ ಭಾಗಗಳ ಗಣ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಪೂರಕವಾಗಿ ಖ್ಯಾತ ಕಲಾವಿದರಿಂದ ಗಾಯನ, ವಾದನ ಕಾರ್ಯಕ್ರಮ ನಡೆಯಿತು.