ಕಾರವಾರ: ಡಿಸೆಂಬರ್ 30ರಿಂದ ಮಂಗಳೂರಿನಿಂದ ಮಡಗಾಂವ್’ಗೆ ಆರಂಭಗೊಳ್ಳುವ ವಂದೇ ಭಾರತ್ ಎಕ್ಸ್-ಪ್ರೆಸ್ ರೈಲನ್ನು ಕಾರವಾರ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಡಿಸೆಂಬರ್ 30 ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 2.54ಕ್ಕೆ ಕಾರವಾರ ರೈಲ್ವೆ ನಿಲ್ದಾಣ ತಲುಪಲಿದೆ. ಇಲ್ಲಿ ರೈಲನ್ನು ಪುಷ್ಪಾರ್ಚನೆ ಮಾಡುವ ಮೂಲಕ ಮತ್ತು ವಿವಿಧ ಸಾಂಸ್ಕೃತಿಕ ಕಲಾವೈಭವಗಳ ಮೂಲಕ ಸ್ವಾಗತಿಸಲಾಗುವುದು. ನಂತರ ಶಾಸಕ ಸತೀಶ್ ಸೈಲ್ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ರೈಲು ಮಡಗಾಂವ್ಗೆ ತೆರಳಲಿದೆ. ಪ್ರಾರಂಭದ ದಿನದಂದು ಈ ರೈಲಿನಲ್ಲಿ ಕಾರವಾರದಿಂದ ಮಡಂಗಾವ್ಗೆ ತೆರಳಲು ಮತ್ತು ವಾಪಸ್ ಕಾರವಾರಕ್ಕೆ ಆಗಮಿಸಲು 300 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಕಾರವಾರದ ಹಿರಿಯ ಪ್ರಾದೇಶಿಕ ಇಂಜಿನಿಯರ್ ಬಿ.ಎಸ್. ನಾಡಗೆ ತಿಳಿಸಿದ್ದಾರೆ.
ಈ ರೈಲು ಗಂಟೆಗೆ 160 ಕಿಮೀಗೂ ಅಧಿಕ ವೇಗದಲ್ಲಿ ಚಲಿಸಲಿದ್ದು, 8 ಕೋಚ್ಗಳನ್ನು ಹೊಂದಿದೆ. ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು, ಏರ್ ಲೈನ್ ಮಾದರಿಯ ಸೀಟುಗಳ ಜೊತೆಗೆ ಎಕ್ಸಿಕ್ಯೂಟಿವ್ ಚೆರ್ ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಕೂಡಾ ಇದೆ. ಆನ್ ಬೋರ್ಡ್ ವೈಫೈ, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್, ಸಿಸಿಟಿವಿಗಳು ಮತ್ತಿತರ ಆಧುನಿಕ ಸೌಲಭ್ಯಗಳು ಇವೆ. ಭಾನುವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚರಿಸಲಿದ್ದು, ಬೆಳಗ್ಗೆ 11ಕ್ಕೆ ಮಂಗಳೂರಿನಿಂದ ಹೊರಟು 12.25 ಕ್ಕೆ ಉಡುಪಿ, 2.52ಕ್ಕೆ ಕಾರವಾರ 4.40 ಕ್ಕೆ ಮಡಂಗಾವ್ ತಲುಪಲಿದೆ. ಮಡಗಾಂವ್ ನಿಂದ ಸಂಜೆ 5.10 ಕ್ಕೆ ಹೊರಟು, 5.50 ಕ್ಕೆ ಕಾರವಾರ, 8.10 ಕ್ಕೆ ಉಡುಪಿ, 10.15ಕ್ಕೆ ಮಂಗಳೂರು ತಲುಪಲಿದೆ. ಮಾರ್ಗ ಮಧ್ಯೆ ಕಾರವಾರ ಮತ್ತು ಉಡುಪಿ ಹೊರತುಪಡಿಸಿ ಬೇರೆಲ್ಲೂ ನಿಲುಗಡೆ ಇರುವುದಿಲ್ಲ ಎಂದು ಕಾರವಾರ ರೈಲ್ವೆ ನಿಲ್ದಾಣದ ಸ್ಟೇಶನ್ ಇನ್ ಚಾರ್ಜ್ ಉದಯ ಸಾರಂಗ್ ತಿಳಿಸಿದ್ದಾರೆ.