ಶಿರಸಿ: ಅಯೋಧ್ಯೆ ಶ್ರೀರಾಮಜನ್ಮಭೂಮಿ ಮಂದಿರ ಅಕ್ಷತ ಅಭಿಯಾನ ಜಿಲ್ಲಾದ್ಯಂತ ಜ.1 ರಿಂದ 15 ರ ವರೆಗೆ ನಡೆಯಲಿದ್ದು, ಅಯೋಧ್ಯೆಯ ರಾಮಾಕ್ಷತೆಯನ್ನು ಪ್ರತಿ ಮನೆಗೆ ವಿತರಿಸುವ ಮಹತ್ಕಾರ್ಯ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು.
ಅವರು ನಗರದ ಶ್ರೀ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಶ್ರೀರಾಮ ಮಂದಿರ ಅಕ್ಷತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮ ಬೇರೆಯಲ್ಲ, ಭಾರತ ಬೇರೆಯಲ್ಲ. ರಾಮಕಾರ್ಯಕ್ಕಾಗಿ ಸಮಸ್ತ ಹಿಂದೂ ಸಮಾಜ ತನ್ನನ್ನು ಸಮರ್ಪಿಸಿಕೊಂಡ ರೀತಿ ನಿಜಕ್ಕೂ ಪ್ರೇರಣಾದಾಯಿ. ಅದರ ಪ್ರತಿಫಲ ಇಂದು ವಿಶ್ವಕ್ಕೆ ಗೋಚರಿಸುತ್ತಿದೆ. ಇಡೀ ರಾಷ್ಟ್ರವು ರಾಮನ ಕ್ಷೇತ್ರವಾದ ಅಯೋಧ್ಯೆಯಾಗಿ ಪರಿವರ್ತನೆಯಾಗಬೇಕಿದೆ. ನಮ್ಮೂರಿನ ಮಂದಿರ, ಮನೆಗಳೇ ಅಯೋಧ್ಯೆಯನ್ನಾಗಿಸಬೇಕೆಂದು ಅವರು ಹೇಳಿದರು.
ಸ್ವಾತಂತ್ರ್ಯಾನಂತರ ಭಾರತದ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರಿಂದ ಸೋಮನಾಥ ದೇವಾಲಯದ ಪುನುರುತ್ಥಾನಕ್ಕೆ ಆರಂಭಗೊಂಡು, ನಂತರದಲ್ಲಿ ವೈಭವದಿಂದ ತನ್ನ ಭಕ್ತರಿಗೆ ದರ್ಶನವನ್ನು ನೀಡುತ್ತಿದೆ. ಅಂತೆಯೇ ಶತಮಾನಗಳ ಕಾಲದಿಂದ ಅಯೋಧ್ಯೆ, ಮಥುರಾ, ಕಾಶಿಯ ವಿಮೋಚನೆಗಾಗಿ ಸಂಘಟಿದ ಹಿಂದೂ ಸಮಾಜ ಕಂಕಣ ತೊಟ್ಟು ಕಟಿಬದ್ಧವಾಗಿ ನಿಂತ ಪರಿಣಾಮ, ಇದೀಗ ಅಯೋಧ್ಯೆಯಲ್ಲಿ ನಮ್ಮೆಲ್ಲರ ಜೀವಿತಾವಧಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
1992 ರ ಅಯೋಧ್ಯೆಯಲ್ಲಿ ನಡೆದ ಕಾರಸೇವೆಯಲ್ಲಿ 7 ಲಕ್ಷಕ್ಕೂ ಅಧಿಕ ರಾಮಭಕ್ತರು 4 ಗಂಟೆಗಳ ಅವಧಿಯಲ್ಲಿ ಅಕ್ರಮ ಬಾಬರಿ ಕಟ್ಟಡವನ್ನು ನೆಲಸಮಗೊಳಿಸಿ, ಬಾಲರಾಮನಿಗೆ ಗುಡಿಯನ್ನು ಕಟ್ಟಿ ಪೂಜಿಸಿದ್ದು ಐತಿಹಾಸಿಕವಾಗಿದೆ. ಹಿಂದೂ ಸಮಾಜದ ಸತತ ಹೋರಾಟದ ಪ್ರತಿಫಲವಾಗಿ ಇದೀಗ ಭವ್ಯ ಮಂದಿರ ನಿರ್ಮಾಣಗೊಳ್ಳುತ್ತಿದೆ. ನಾವೆಲ್ಲರೂ ಜ.22 ರಂದು ನಡೆಯಲಿರುವ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಂಭ್ರಮ, ಸಡಗರದಿಂದ ನಮ್ಮೂರಿನ ಮಂದಿರಗಳಲ್ಲೇ ಭಕ್ತಿಯಿಂದ ಪಾಲ್ಗೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ರವೀಂದ್ರ ನಾಯ್ಕ, ಶ್ರೀರಾಮ ಮಂದಿರ ಅಕ್ಷತ ಅಭಿಯಾನದ ಶಿರಸಿ ಜಿಲ್ಲಾ ಸಂಯೋಜಕ ಗೋಪಾಲ ಹೆಗಡೆ ಇದ್ದರು. ಶಿರಸಿ ನಗರದ ಎಲ್ಲಾ ವಾರ್ಡ್ಗಳಿಗೆ ನೂರಾರು ಕಾರ್ಯಕರ್ತರ ಮೂಲಕ ರಾಮಾಕ್ಷತೆ ತಲುಪಿಸುವ ಕೆಲಸ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಂಚಾಲಕ ಅಮಿತ್ ಶೇಟ್, ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ ಕರ್ಕಿ, ಭಾಜಪಾದ ನಂದನ ಸಾಗರ, ಚಂದ್ರು ಎಸಳೆ, ಶ್ರೀಮಾರಿಕಾಂಬಾ ದೇವಾಲಯದ ಧರ್ಮದರ್ಶಿಗಳು, ಸಿಎ ಉದಯ ಸ್ವಾದಿ ಸೇರಿದಂತೆ ನೂರೈವತ್ತಕ್ಕೂ ಅಧಿಕ ಜನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತೆಯರೂ ಸಹ ಸಮಾನ ಸಂಖ್ಯೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.