Slide
Slide
Slide
previous arrow
next arrow

ಸಂಚಾರಕ್ಕೆ ಸೂಕ್ತ ವ್ಯವಸ್ಥೆಗಳಿಲ್ಲದೆ ಮಕ್ಕಳ ಪರದಾಟ: ಅಧಿಕಾರಿಗಳ ಬೇಜವಾಬ್ದಾರಿಗೆ ಪಾಲಕರ ಹಿಡಿಶಾಪ

300x250 AD

ಜೊಯಿಡಾ : ನಮ್ಮ ಮಕ್ಕಳು ಕಲಿಯಬೇಕು , ನಮಗಿಲ್ಲದ ಶಿಕ್ಷಣ ಅವರಿಗಾದರೂ ಸಿಗಲಿ ಎಂಬ ಆಶೆ ಪಾಲಕರಿಗೆ ಇರುವುದು ಸಹಜ . ಆದರೆ ಹತ್ತಿರ ಶಾಲೆಗಳಿಲ್ಲ, ವಸತಿ ನಿಲಯಗಳಲ್ಲಿ ಮಿತಿಗಿಂತ ಜಾಸ್ತಿ ವಿದ್ಯಾರ್ಥಿಗಳನ್ನು ಸೇರಿಸುವಂತಿಲ್ಲ. ಎಂದರೆ ವಿದ್ಯಾರ್ಥಿಗಳ ಪಾಡೇನು?
ಇದು ಜೊಯಿಡಾ ತಾಲೂಕಿನ ರಾಮನಗರ ಜಿಲ್ಲಾ ಪಂಚಾಯತ ಕ್ಷೇತ್ರದ ಜಳಕಟ್ಟಿ ಗ್ರಾಮದ ವಿದ್ಯಾರ್ಥಿಗಳ ಗೋಳು.

ಮಳೆ ಬರಲಿ ಚಳಿ ಇರಲಿ , ಸುಡುವ ಬಿಸಿಲು ಇದ್ದರೂ ಪ್ರತಿ ದಿನ 4 ರಿಂದ 8 ಕಿಮಿ ನಡೆದಾಗಲೇ ಇವರಿಗೆ ಶಾಲೆ . ರಾಮನಗರ , ಅನಮೊಡ ಗೋವಾ ಮಾರ್ಗದಲ್ಲಿ ಜಳಕಟ್ಟಿ ಗ್ರಾಮವಿದೆ. ಇಲ್ಲಿ 1 ರಿಂದ 4 ರ ವರೆಗಿನ ತರಗತಿ ಇದ್ದು ಚಿಕ್ಕ ಮಕ್ಕಳು ಶಾಲೆಗೆ ಹೋಗುತ್ತಿದ್ದು 5ನೆ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಅನಮೊಡ (4ಕಿಮಿ) ಇಲ್ಲವೇ ರಾಮನಗರ (20ಕಿಮಿ) ಕ್ಕೆ ಹೋಗಬೇಕು.

ಗೋವಾ ಹೆದ್ದಾರಿಯಲ್ಲಿ ಬಿಡುವಿಲ್ಲದೆ ವಾಹನಗಳು , ಸಾರಿಗೆ ಬಸ್ ಗಳು ಓಡಾಡಿದರೂ ಈ ಮಕ್ಕಳಿಗೆ ಕೆಸರು ನೀರು ಸಿಡಿಸಿ ಓಡಾಡುತ್ತವೆ ಹೊರತು ಯಾರೂ ವಿದ್ಯಾರ್ಥಿಗಳ ನೆರವಿಗೆ ಬರುತ್ತಿಲ್ಲ.

ಭದ್ರತೆ ಇಲ್ಲ:
ಈ ಮಾರ್ಗದಲ್ಲಿ ಮಕ್ಕಳಿಗಾಗಿ ಸಾರಿಗೆ ಬಸ್ಸನ್ನು ಇಲಾಖೆ ಬಿಡುತ್ತಿಲ್ಲ. ಕೆಡಿಪಿ ಸಭೆಗಳಲ್ಲಿ ಪ್ರಸ್ತಾಪ ಬಂದರೂ ದಾಂಡೇಲಿ ಘಟಕ ಜೊಯಿಡಾ ತಾಲೂಕಿಗೆ ಮಲತಾಯಿ ದೋರಣೆ ತೋರುತ್ತಿದ್ದು , ಪ್ರತಿ ದಿನ ಮಕ್ಕಳ ಗೋಳಾಟ ತಾಲೂಕಿನ ಎಲ್ಲ ಭಾಗದಲ್ಲೂ ಇದೆ. ತಾಲೂಕಿಗೆ ಸಾರಿಗೆ ಘಟಕವಿಲ್ಲ. ಕಂಡ ಕಂಡ ವಾಹನಗಳಿಗೆ ಕೈ ಮಾಡಿ ಬೇಡುವ ಸ್ಥಿತಿ ನಿರ್ಮಾಣವಾಗಿದೆ.

2 ವರ್ಷಗಳ ಹಿಂದೆ ಇದೇ ಹೆದ್ದಾರಿಯ ಶಾಲೆಯ ಶಿಕ್ಷಕಿ ಮೇಲೆ ದರೋಡೆ ಕೂಡ ನಡೆದಿತ್ತು. ಇಂಥ ಸ್ಥಿತಿಯಲ್ಲಿರುವ ಮಕ್ಕಳ ಮೇಲೆ ಸಾರಿಗೆ ಇಲಾಖೆ ಮಲತಾಯಿ ದೋರಣೆ ನಡೆಸುತ್ತಿರುವುದನ್ನು ಕೂಡ ಸಾರ್ವಜನಿಕರು ಖಂಡಿಸಿದ್ದಾರೆ.

300x250 AD

ಕರೋನಾ ನಂತರ ಸರಕಾರ ಸೈಕಲ್ ವಿತರಣೆ ನಿಲ್ಲಿಸಿದೆ. ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಸ್ ಮಾತ್ರ ಸುರಕ್ಷಿತವಾಗಿರುತ್ತದೆ. ಸಾರಿಗೆ ಇಲಾಖೆ ಜೊಯಿಡಾ ತಾಲೂಕಿನ ಎಲ್ಲ ಭಾಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಿಕೊಡಬೇಕೆಂದು ನಾಗರಿಕರ ಬೇಡಿಕೆಯಾಗಿದೆ.

ಜಳಕಟ್ಟಿ ಗ್ರಾಮದಿಂದ ರಾಮನಗರ , ಅನಮೊಡ ಗಳಿಗೆ ಪ್ರತಿ ದಿನ 40ಕ್ಕು ಹೆಚ್ಚು ವಿದ್ಯಾರ್ಥಿಗಳು ಓಡಾಡುತ್ತಾರೆ. ಆದರೆ ಈ ಮಾರ್ಗದಲ್ಲಿ ಓಡಾಡುವ ಬಸ್ ಗಳು ತಡೆ ರಹಿತ ಎಂದು ಬೋರ್ಡ್ ಹಾಕಿ ಓಡಾಡುತ್ತವೆ. ಸ್ಥಳೀಯ ಆಡಳಿತ ಸ್ಥಳೀಯರಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಿಕೊಡುವುದು ಹಿಂದುಳಿದ ಗ್ರಾಮದ ಜನತೆಗೆ ಬೇಕಾಗಿದೆ.

ಮಕ್ಕಳ ಕಷ್ಟ ನನ್ನ ಗಮನಕ್ಕೆ ಇದೆ. ಹಾಗಾಗಿ ಕಳೆದ 19 ರಂದು ನಡೆದ ಜಿಲ್ಲಾಧಿಕಾರಿಗಳ ಜನತಾ ದರ್ಶನದಲ್ಲಿ ಕೂಡ ಸಾರಿಗೆ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಕೇಳಿಕೊಂಡಿದ್ದೆನೆ. ಅವರು ಕೂಡ ಕ್ರಮ ಕೈ ಕೊಳ್ಳುವ ಭರವಸೆ ನೀಡಿದ್ದಾರೆ.
ಬಶೀರ್ ಅಹ್ಮದ್ ಶೇಖ್
ಕ್ಷೇತ್ರ ಶಿಕ್ಷಣಧಿಕಾರಿ ಜೊಯಿಡಾ

Share This
300x250 AD
300x250 AD
300x250 AD
Back to top