ಯಲ್ಲಾಪುರ : ಜನಪ್ರತಿನಿಧಿಗಳು ಯಾವುದೇ ಒಂದು ಸಮಾಜಕ್ಕೆ ಅಥವಾ ಧರ್ಮಕ್ಕೆ ಸೀಮಿತರಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸಮಾಜವನ್ನು ಪ್ರತಿನಿಧಿಸಿದಾಗ ಆ ಸಮಾಜದ ಏಳ್ಗೆಗಾಗಿ, ಅಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಅವರು ಪಟ್ಟಣದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ನಡೆದ ನಾಮಧಾರಿ ಸಮಾಜದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವೈಯಕ್ತಿಕ ಆಶಯಗಳ ಈಡೇರಿಕೆಗಾಗಿ ಸಂಘಗಳು ಕಾರ್ಯ ನಿರ್ವಹಿಸಬಾರದು. ನಾವು ಸಾಮಾಜಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಿ, ನಮ್ಮಿಂದ ಸಾಧ್ಯವಾದಷ್ಟು ಜನರಿಗೆ ವಿದ್ಯೆ ನೀಡುವಂತಾಗಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ಸಮಾಜದ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡಬೇಕು ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಮಾಜದ ಸಂಘಟನೆ ನಡೆಸಿ, ಬೆಳೆಸುವುದು ಕೇವಲ ಅಧ್ಯಕ್ಷರ, ಪದಾಧಿಕಾರಿಗಳ ಕಾರ್ಯವಲ್ಲ. ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ಬಲಿಷ್ಠ ಸಂಘಟನೆ ಸಾಧ್ಯ. ನಮ್ಮಲ್ಲಿರುವ ತೊಡಕುಗಳನ್ನು ದೂರವಿಟ್ಟು, ಎಲ್ಲರೂ ಒಂದಾಗಿ ಮುನ್ನಡೆದಾಗ ಸಮಾಜದ ಉತ್ತಮ ಭವಿಷ್ಯವನ್ನು ಕಾಣಲು ಸಾಧ್ಯ. ಯಲ್ಲಾಪುರದಲ್ಲಿ ಒಂದು ನಾಮಧಾರಿ ಭವನ ನಿರ್ಮಾಣಕ್ಕೆ ಸಹಕಾರ ನೀಡುತ್ತೇನೆ ಎಂದರು.
ಯಲ್ಲಾಪುರದ ಸಮಗ್ರ ನಾಮಧಾರಿ ಅಭಿವೃದ್ದಿ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಭೀಮಣ್ಣ ನಾಯ್ಕ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಎಲ್. ನಾಯ್ಕ, ಉದ್ಯಮಿ ಈಶ್ವರ ನಾಯ್ಕ, ಡಾ. ನಾಗೇಶ ನಾಯ್ಕ, ಹೆಸ್ಕಾಂ ಸೆಕ್ಷನ್ ಆಫೀಸರ್ ರಮಾಕಾಂತ ನಾಯ್ಕ, ಯುವ ನಾಮಧಾರಿ ಸಂಘದ ಅಧ್ಯಕ್ಷ ಸೋಮೇಶ್ವರ ನಾಯ್ಕ, ವಜ್ರಳ್ಳಿ ಗ್ರಾಂ.ಪಂ. ಅಧ್ಯಕ್ಷ ಭಗೀರಥ ನಾಯ್ಕ ಇತರರಿದ್ದರು. ಭೂಮಿಕಾ ಮಹೇಶ ನಾಯ್ಕ ಪ್ರಾರ್ಥಿಸಿದರು. ಗುರು ಸಹಕಾರಿ ಸಂಘದ ಅಧ್ಯಕ್ಷ ರವಿ ನಾಯ್ಕ, ಸಂತೋಷ ನಾಯ್ಕ, ನರ್ಮದಾ ನಾಯ್ಕ ನಿರ್ವಹಿಸಿದರು.