ದಾಂಡೇಲಿ : ಹೆಚ್. ಕಾಂತರಾಜ್ ರವರ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015 ರಲ್ಲಿ ಸುಮಾರು 170 ಕೋಟಿ ರೂ.ಗಳ ಸಾರ್ವಜನಿಕ ವೆಚ್ಚದಲ್ಲಿ, ಸರ್ಕಾರದ ಸುಪರ್ಧಿಯಲ್ಲಿರುವ 22,180 ಮೇಲ್ವಿಚಾರಕ ಅಧಿಕಾರಿಗಳ ಉಸ್ತುವಾರಿಯಲ್ಲಿ 1,33,140 ನೌಕರ ಗಣತಿದಾರರು ಒಂದು ತಿಂಗಳ ಕಾಲ ರಾಜ್ಯದಾದ್ಯಂತ ತಲಾ 150 ರಿಂದ 175 ಮನೆಗಳಿಗೆ ಭೇಟಿ ಮಾಡಿ ಸುಮಾರು 55 ಪ್ರಶ್ನೆಗಳ ಮೂಲಕ, ಸುಮಾರು 1,351 ಜಾತಿ – ಉಪ ಜಾತಿಗಳ ಕುಟುಂಬಗಳಿಂದ ಸಂಗ್ರಹಿಸಲಾದ ಮಹತ್ವದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಜಾತಿ ಗಣತಿಯ ವರದಿಯನ್ನು ಕೂಡಲೇ ಸಾರ್ವಜನಿಕ ಚರ್ಚೆಗೆ ದೊರೆಯುವಂತೆ ಅಗತ್ಯ ಕ್ರಮವಹಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ಡಿವೈಎಫ್ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಸ್ಯಾಮಸನ್ ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ಅಗಾಧ ಶ್ರಮ ಹಾಗೂ ಸಂಪನ್ಮೂಲಗಳ ವ್ಯಯದೊಂದಿಗೆ ಸಿದ್ಧಪಡಿಸಲಾದ ವರದಿಯನ್ನು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮೂಲೆಗುಂಪಾಗಲು ಬಿಡಬಾರದೆಂದು ಒತ್ತಾಯಿಸಿದ್ದಾರೆ.