ಅಂಕೋಲಾ: ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ತಾಲೂಕಿನ ಸುಂಕಸಾಳದ ಸರಕಾರಿ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿ ಪ್ರಕಾಶ ಸೀತಾರಾಮ ಗೌಡ ಹೈಜಂಪ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ವಿಜೇತರಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಸುಂಕಸಾಳ ಸರಕಾರಿ ಪ್ರೌಢಶಾಲೆಯ ಮತ್ತು ಶಾಲಾಡಳಿತ ಮಂಡಳಿಯ ವತಿಯಿಂದ ಬುಧವಾರ ಶಾಲೆಯ ಸಭಾಭವನದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ವಿದ್ಯಾರ್ಥಿ ಪ್ರಕಾಶ ಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಷ್ಟಪಟ್ಟು ಶ್ರಮ ಪಟ್ಟರೆ ಸಾಧಿಸಲು ಯಾವದೂ ಕಷ್ಟವಲ್ಲ. ಪ್ರಕಾಶ ಗೌಡ ಸಾಧನೆ ತಾಲೂಕಿಗೇ ಹೆಮ್ಮೆ ತಂದಿದೆ. ಇಂತಹ ಗ್ರಾಮೀಣ ಪ್ರತಿಭೆಗಳನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಪ್ರತಿಭೆಗಳಿಗೆ ಪೌಷ್ಠಿಕ ಆಹಾರ ಮತ್ತು ಸೂಕ್ತ ತರಬೇತಿಯೂ ಅವಶ್ಯ. ಇಲ್ಲಿ ಸಾಕಷ್ಟು ಪ್ರತಿಭೆಗಳಿವೆ ಆದರೆ ಕ್ರೀಡಾ ತರಬೇತಿ ಶಾಲೆಗಳು ದೂರದಲ್ಲಿರುವದರಿಂದ ಇಲ್ಲಿನ ಪಾಲಕರು ತಮ್ಮ ಮಕ್ಕಳನ್ನು ಅಲ್ಲಿ ಸೇರಿಸಲು ಒಪ್ಪುತ್ತಿಲ್ಲ. ಆದರೂ ಕೇವಲ ಶಿಕ್ಷಣವೇ ಅಂತಿಮವಾಗದೆ ಸಾಂಸ್ಕ್ರತಿಕ ಮತ್ತು ಕ್ರೀಡಾಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡೋಣ ಎಂದರು. ಹಾಗೂ ಮೆಟ್ರಿಕ್ ಪರೀಕ್ಷೆಯಲ್ಲೂ ಶೇ.100 ಫಲಿತಾಂಶ ಸಾಧನೆ ಮಾಡಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸುಂಕಸಾಳ ಗ್ರಾ.ಪಂ. ಅಧ್ಯಕ್ಷೆ ರಮೀಜಾ ಸಯ್ಯದ್ ಮಾತನಾಡಿ ಅದ್ಭುತ ಕ್ರೀಡಾ ಪ್ರತಿಭೆ ಪ್ರಕಾಶ ಸೀತಾರಾಮ ಗೌಡ ಈತನ ಕ್ರೀಡಾ ಸಾಧನೆಯಿಂದ ಈ ಶಾಲೆಯು ತಾಲೂಕಿನಲ್ಲೇ ಗುರುತಿಸುವಂತಾಗಿದ್ದು ಸಂತಸ ತಂದಿದೆ. ಸಾಧನೆಗೆ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಬಹುದು. ಇಂತಹ ಪ್ರತಿಭೆಗಳಿಗೆ ಗ್ರಾ.ಪಂ. ಮೂಲಕ ಸಕಲ ಸಹಾಯ ಮಾಡಲಾಗುವದು. ಈತನ ಮುಂದಿನ ಪಯಣಕ್ಕೆ ಎಲ್ಲರೂ ಸಹಾಯ ಮಾಡಬೇಕು ಎಂದರು. ವೇದಿಕೆಯಲ್ಲಿ ಪ್ರಕಾಶ ಗೌಡ ಅವರ ತಂದೆ ಸೀತಾರಾಮ ಗೌಡ, ತಾಯಿ ನಾಗವೇಣಿ ಗೌಡ, ಹೆಬ್ಬುಳ ಗ್ರಾ.ಪಂ. ಸದಸ್ಯ ಪ್ರವೀಣ ನಾಯರ, ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಶಿವಾನಂದ ನಾಯಕ, ಉಪಾಧ್ಯಕ್ಷ ಮಂಜುನಾಥ ನಾಯ್ಕ, ಬಿ ಆರ್ ಪಿ ರಾಘು ಉಪಸ್ಥಿತರಿದ್ದರು.
ಮುಖ್ಯಾಧ್ಯಾಪಕಿ ಇಂದಿರಾ ಹಾರವಾಡೇಕರ ಸ್ವಾಗತಿಸಿದರು. ದೈಹಿಕ ಶಿಕ್ಷಕಿ ಶೋಭಾ ಆರ್ ನಾಯಕ ವಿದ್ಯಾರ್ಥಿ ಪ್ರಕಾಶ ಗೌಡ ಅವರ ಕ್ರೀಡಾ ಸಾಧನೆಯನ್ನು ಪರಿಚಯಿಸಿದರು. ಶಿಕ್ಷಕಿ ಬೇಬಿ ನಾಯಕ ಪ್ರಾಸ್ತಾವಿಕ ಮಾತನಾಡಿದರು ಹಾಗೂ ಕಾರ್ಯಕ್ರಮ ನಿರ್ವಹಿಸಿದರು. ತೇಜಸ್ವಿನಿ ನಾಯಕ ವಂದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿ ಗೀತಾ ಮಾಲ್ವಣಕರ, ಅಕ್ಷತಾ ನಾಯಕ, ಮೋಹನ ನಾಯಕ, ಭಾಗ್ಯಜ್ಯೋತಿ, ಶಾಲೆಗೆ ಸ್ಥಳದಾನ ನೀಡಿದ್ದ ಕುಟುಂಬಸ್ಥರಾದ ನಾರಾಯಣ ವೆಂಕಟರಮಣ ಶೆಟ್ಟಿ ಇದ್ದರು. ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಕಾರ್ಯಕ್ರಮದ ಮೊದಲು ಪ್ರಕಾಶ ಗೌಡ ಅವರನ್ನು ಸುಂಕಸಾಳ ಗ್ರಾ.ಪಂ. ಎದುರಿನಿಂದ ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಈ ವೇಳೆ ಊರಿನ ಸಾರ್ವಜನಿಕರೂ ಜೊತೆಯಾದರು. ಕಳೆದ ಸಾಲಿನಲ್ಲೂ ಈ ಶಾಲೆಯ ವಿದ್ಯಾರ್ಥಿಗಳಾದ ಸಿದ್ದೇಶ ವಿ ನಾಯ್ಕ, ರೋಶನ್ ಬೋರ್ಜಿಸ್ ಕ್ರೀಡೆಯಲ್ಲಿ ಮತ್ತು ಶ್ರೀದೇವಿ ನಾಯಕ ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದವರೆಗೆ ಪ್ರತಿನಿಧಿಸಿದ್ದರು ಎಂಬುದು ಉಲ್ಲೇಖನೀಯ.