ಶಿರಸಿ: ಮನುವಿಕಾಸ ಸಂಸ್ಥೆಯು ರೈತರು ಹಾಗೂ ಮಹಿಳೆಯರಿಗೆ ಶಕ್ತಿ, ನೇಮ್ಮದಿ ಮತ್ತು ಆರ್ಥಿಕ ಬಲ ಒದಗಿಸುತ್ತಿದ್ದು, ಮಹಿಳೆಯರು ಹಾಗೂ ರೈತರು ನೆಮ್ಮದಿಯಿಂದಿದ್ದಾಗ ಮಾತ್ರ ಸಮಾಜ ಉತ್ತಮವಾಗಿರಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಮನುವಿಕಾಸ ಸಂಸ್ಥೆ ಹಾಗೂ ಇಡಲ್‌ಗೀವ್ ಪೌಂಡೇಶನ್ ವತಿಯಿಂದ ಸೋಮವಾರ ನಗರದ ಅಗಸೆಬಾಗಿಲಿನ ದೈವಜ್ಞ ಕಲಾಮಂಟಪದಲ್ಲಿ ಹಮ್ಮಿಕೊಂಡ ಸ್ವ-ಸಹಾಯ ಸಂಘಗಳ ಬೃಹತ್ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಲು ಸಂಸ್ಥೆ ಮಾಡುತ್ತಿರುವ ಕಾರ್ಯ ಮಹತ್ವದ್ದು. ಮಹಿಳೆಯರು ಆರ್ಥಿಕವಾಗಿ ಸಧೃಡರಾಗಿದ್ದಾಗ ಮಾತ್ರ ಸಮಾಜವೂ ಸಧೃಢವಾಗಲು ಸಾಧ್ಯ ಎಂದರು.
ಸAಸ್ಥೆಯು ವಿವಿಧ ಭಾಗಗಳಲ್ಲಿನ ಕೆರೆ ಹೂಳೆತ್ತುವಿಕೆ, ಅಭಿವೃದ್ಧಿ ಹಾಗೂ ಕೃಷಿ ಹೊಂಡಗಳನ್ನು ನಿರ್ಮಿಸುವ ಮೂಲಕ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುತ್ತಿದೆ. ರೈತರಿದ್ದರೆ ಮಾತ್ರ ನಾವೆಲ್ಲರೂ ಇರಲು ಸಾಧ್ಯ ಎಂದ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಹೀಳಾ ಸಬಲೀಕರಣಕ್ಕೆ ಹಾಗೂ ಸ್ವಸಹಾಯ ಸಂಘಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ತುಂಬುವ ಕಾರ್ಯ ಮಾಡುವಂತಾಗಬೇಕು ಎಂದರು.
ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಪ್ರಾಸ್ತಾವಿಕ ಮಾತನಾಡಿ, 2003 ರಲ್ಲಿ ಕರ್ಜಗಿಯಂತಹ ಚಿಕ್ಕ ಗ್ರಾಮದಲ್ಲಿ ಪ್ರಾರಂಭವಾದ ಈ ಸಂಸ್ಥೆಯು, ಇಂದು 5 ಜಿಲ್ಲೆಯ 1300 ಹಳ್ಳಿಗಳ 60 ಸಾವಿರ ಕುಟುಂಬ ಹೊಂದುವ ಮೂಲಕ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಬಡ ಕುಟುಂಬದ ಜನರ ಜೀವನದ ಆರ್ಥಿಕ ಗುಣಮಟ್ಟ ಹೆಚ್ಚಿಸುವುದೇ ಸಂಸ್ಥೆಯ ಧ್ಯೇಯವಾಕ್ಯ. ಮಹಿಳೆ ತಾಳ್ಮೆಯ ಪ್ರತೀಕ. ಮಹಿಳೆ ಸಂತೋಷದಲ್ಲಿದ್ದಾಗ ಮಾತ್ರ ಅವಳ ಕುಟುಂಬ ಹಾಗೂ ಸಮಾಜ ನೆಮ್ಮದಿಯಿಂದಿರಲು ಸಾಧ್ಯ ಎಂದ ಅವರು, ಮಹಿಳಾ ಸಬಲೀಕರಣವೇ ನಮ್ಮ ಉದ್ದೇಶ ಎಂದರು.
ನಮ್ಮ ಸಂಸ್ಥೆಯ ವತಿಯಿಂದ ಈಗಾಗಲೇ 3300 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ಪ್ರತಿದಿನ 4-5 ಕೃಷಿ ಹೊಂಡಗಳನ್ನು ನಿರ್ಮಿಸುತ್ತಿದ್ದೇವೆ. ಅಲ್ಲದೇ, 4 ಜಿಲ್ಲೆಗಳಲ್ಲಿ 225 ಕೆರೆಗಳ ಹೂಳೆತ್ತುವಿಕೆಯ ಕಾರ್ಯ ನಡೆದಿದ್ದು, 10 ನೂತನ ಕೆರೆಗಳನ್ನು ನಿರ್ಮಿಸಲಾಗಿದೆ. ಬೋರ್‌ವೆಲ್ ಕೂಡ ಕೊರೆಸಿ, ರೈತರಿಗೆ ಅನುಕೂಲ ಕಲ್ಪಿಸಿದ್ದೇವೆ. ಸಧ್ಯದಲ್ಲೇ ರೈತ ಉತ್ಪಾದಕ ಕಂಪನಿ ಪ್ರಾರಂಭಿಸಿ, ರೈತರಿಗೆ ಆರ್ಥಿಕ ಅನುಕೂಲ ಕಲ್ಪಿಸಲಿದ್ದೇವೆ ಎಂದು ತಿಳಿಸಿದ ಅವರು, ನಮ್ಮ ಸಂಸ್ಥೆಯ ಈ ಎಲ್ಲ ಕಾರ್ಯಕ್ಕೆ ಟಾಟಾ, ಇನ್ಫೋಸಿಸ್ ಸೇರಿದಂತೆ ದೊಡ್ಡ ದೊಡ್ಡ ಉದ್ಯಮಗಳ ಸಹಕಾರ ಸಾಕಷ್ಟಿದ್ದು, ಇದರಿಂದ ಮಾತ್ರ ಈ ಎಲ್ಲ ಕಾರ್ಯಗಳು ಸರಾಗವಾಗಿ ಸಾಗುತ್ತಿದೆ. ನಮ್ಮ ಸಂಸ್ಥೆಯ ಜನಪರ ಕಾರ್ಯ ನಿರಂತರವಾಗಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನುವಿಕಾಸ ಸಂಸ್ಥೆಯ ಸಂಸ್ಥಾಪಕ ಹರಿಶ್ಚಂದ್ರ ಭಟ್ಟ ಆಶಯನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿ ಹಾಗೂ ರೈತ ಉತ್ಪಾದಕ ಸಂಘದ 4 ಮಹಿಳೆಯರಿಗೆ ಹಾಗೂ 8 ಸ್ವ-ಉದ್ಯಮಶೀಲರು ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು. 6 ಮಾದರಿ ಸ್ವಸಹಾಯ ಸಂಘಗಳಿಗೆ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಪ್ರಗತಿಮಿತ್ರ ಸೌಹಾರ್ದ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ವಿವೇಕ ಹೆಗಡೆ, ಪ್ರಮುಖರಾದ ಕೆ.ಎಸ್.ಗೌಡರ್, ಪೂರ್ಣಿಮಾ ಅಣ್ವೇಕರ್, ಗೀತಾ ಪಂಡಿತ, ನಗರಸಭಾ ಸದಸ್ಯ ರಮಾಕಾಂತ ಭಟ್ಟ, ಶ್ರೀನಿವಾಸ ನಾಯ್ಕ, ವಿಶ್ವನಾಥ ಗೌಡ, ಶ್ರೀಧರ ನಾಯ್ಕ, ಪ್ರಕಾಶ ಮೇಸ್ತ, ಸುಜಾತ ದುರ್ಗೇಕರ್, ರೇಣುಕಾ ತಾಂಡೇಲ, ಗಿರಿಜಾ ಗೌಡ ಇದ್ದರು. ಪವನ ಬೊಮ್ನಳ್ಳಿ ಸ್ವಾಗತಿಸಿದರು. ಕದಂಬ ಕಲಾ ವೇದಿಕೆಯವರು ಪ್ರಾರ್ಥಿಸಿದರು. ಶೇಖರ ನಾಯ್ಕ ನಿರ್ವಹಿಸಿದರು. ಶ್ರೀಕಾಂತ ಹೆಗಡೆ ವಂದಿಸಿದರು.