ಅಂಕೋಲಾ: ತಾಲೂಕಿನ ರೂರಲ್ ರೋಟರಿ ಕ್ಲಬ್ ಅಂಕೋಲಾ ವತಿಯಿಂದ ತಾಲೂಕಾ ಮಟ್ಟದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಕರಿಯರ್ ಗೈಡನ್ಸ್ ಎಂಬ ವಿನೂತನ ಕಾರ್ಯಕ್ರಮವನ್ನು ಪ್ರೌಢಶಾಲೆ ಅಂಕೋಲಾ ನಗರದಲ್ಲಿ ಹಮ್ಮಿಕೊಳ್ಳಲಾಯಿತು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನ ಇಂಡಿಯನ್ ಕಸ್ಟಮ್ಸ್ ನ ಉಪ ಆಯುಕ್ತ ಪ್ರಮೋದ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಇವರು ಮಾತನಾಡಿ ಸರ್ಕಾರದ ಕೆಲಸ ಅಂದರೆ ಅದೊಂದು ಆತ್ಮ ತೃಪ್ತಿ ನೀಡುವ ಸೇವಾ ಕಾರ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಂಡು ಸೇವಾ ಮನೋಭಾವದಿಂದ ದೇಶಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಳಲಕ್ಷ್ಮಿ ಪಾಟೀಲ್ ಮಾತನಾಡಿ ಮಕ್ಕಳು ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ, ಶೃದ್ಧೆ ಬೆಳೆಸಿಕೊಂಡು ಉತ್ತಮ ಜ್ಞಾನ ಸಂಪಾದಿಸಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು ಪ್ರಯತ್ನಿಸಬೇಕು. ಕೇವಲ ಅಂಕಕ್ಕಾಗಿ ಓದದೇ ಜ್ಞಾನಕ್ಕಾಗಿ ಓದಬೇಕು ಎಂದರು.
ಶ್ರೀರಾಮ ಸ್ಟಡಿ ಸರ್ಕಲ್ ನಿರ್ದೇಶಕ ಸೂರಜ ನಾಯಕ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನವೀನ ದೇವರಭಾವಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ಸುಮಾರು 150 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಯಿತು. ರೂರಲ್ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ರೊ.ಹರ್ಷಾ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಖಜಾಂಚಿ ರೊ.ಸದಾನಂದ ನಾಯಕ, ಪ್ರೌಢಶಾಲೆ ಅಂಕೋಲಾ ನಗರದ ಮುಖ್ಯಾಧ್ಯಾಪಕ ಭಾಸ್ಕರ ಗಾಂವಕರ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ನಂತರ ನಾಯಕ ಕ್ರೆಡಿಟ್ ಕೋ..ಆಪ್ ಸೊಸೈಟಿ ವತಿಯಿಂದ ಎಲ್ಲಾ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಯಿತು. ರೊ.ರಾಘವೇಂದ್ರ ಭಟ್ ಸ್ವಾಗತಿಸಿ ನಿರೂಪಿಸಿದರು.
ರೊ. ಕೌಸ್ತುಭ ನಾಯಕ, ಕ್ಷೇತ್ರ ಸಮನ್ವಾಧಿಕಾರಿ ಹರ್ಷಿತಾ ನಾಯಕ, ಬಿ.ಎಲ್.ನಾಯ್ಕ, ರಚನಾ ನಾಯ್ಕ, ಪ್ರೌಢಶಾಲಾ ಮುಖ್ಯಾಧ್ಯಾಪಕರು, ಸಹಶಿಕ್ಷಕರು ಉಪಸ್ಥಿತರಿದ್ದರು.