ಅಂಕೋಲಾ: ಹಿಲ್ಲೂರ-ಹೊಸಕಂಬಿ ವ್ಯಾಪ್ತಿಯ ಬೋರಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಸುಮಾರು 9 ರಿಂದ 10 ಅಡಿ ಉದ್ದವಿರುವ ಕಾಳಿಂಗ ಸರ್ಪವನ್ನು ಅವರ್ಸಾದ ಉರಗ ತಜ್ಞ ಮಹೇಶ ನಾಯ್ಕ ಹಿಡಿದು ಸಂರಕ್ಷಿಸುವ ಮೂಲಕ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.
ಕಾಳಿಂಗ ಸರ್ಪ ಕಂಡ ತಕ್ಷಣ ಸ್ಥಳೀಯರು ಹೊಸಕಂಬಿ ವ್ಯಾಪ್ತಿಯ ಅರಣ್ಯ ಇಲಾಖೆಯ ಗಮನಕ್ಕೆ ತಂದು ಅವರ ಮೂಲಕ ಅವರ್ಸಾದ ಮಹೇಶ ನಾಯ್ಕ ಅವರಿಗೆ ಫೋನ್ ಕರೆಯ ಮೂಲಕ ವಿಷಯ ತಿಳಿಸಿದ್ದರು. ತಕ್ಷಣ ಮಹೇಶ ನಾಯ್ಕ ಕಾಳಿಂಗನ ಸಂರಕ್ಷಿಸಲು ಬರುವ ಭರವಸೆ ನೀಡಿದ್ದಾರೆ. ದೂರದ ಅವರ್ಸಾದ ತನ್ನ ಮನೆಯಿಂದ ಸುಮಾರು 47 ಕಿ.ಮೀ ದೂರವಿರುವ ಬೋರಳ್ಳಿಗೆ ಮಹೇಶ ನಾಯ್ಕ ಬರುವಷ್ಟರಲ್ಲಿ ಮೂಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪ ತೆವಳುತ್ತಾ ಮುಂದೆ ಸಾಗಲಾರಂಭಿಸಿದೆ. ಈ ನಡುವೆ ಕಾಳಿಂಗ ಸರ್ಪದ ಹತ್ತಿರ ನಾಯಿಗಳು ಬೊಗಳುತ್ತಾ ಸಾಗಿದಾಗ, ಕಾಳಿಂಗ ಸರ್ಪವು ಹೆಡೆಯೆತ್ತಿ ನಿಂತಿದೆ. ಇದನ್ನು ಸ್ಥಳೀಯ ಕೆಲವರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಚಿತ್ರೀಕರಿಸಿದ್ದಾರೆ.
ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿದ ಮಹೇಶ ನಾಯ್ಕ, ಗಗನ ನಾಯ್ಕ್, ಸಾಯೀಶ ನಾಯ್ಕ ಮತ್ತು ಹರಿಶ್ಚಂದ್ರ ನಾಯ್ಕ ಹಾಗೂ ಬೋರಳ್ಳಿ ಮತ್ತು ಸುತ್ತಮುತ್ತಲಿನ ಹತ್ತಾರು ಪ್ರಮುಖರು, ಸ್ಥಳೀಯ ಅರಣ್ಯ ಇಲಾಖೆಯವರೊಂದಿಗೆ ಸೇರಿ ಯಶಸ್ವಿ ಕಾರ್ಯಚರಣೆ ನಡೆಸಿ, ಚಾಕಚಕ್ಯತೆಯಿಂದ ಕಾಳಿಂಗ ಸರ್ಪವನ್ನು ಸಂರಕ್ಷಿಸಿದ್ದಾರೆ. ಮಹೇಶ ನಾಯ್ಕ ಅವರು ಹಿಡಿದ 12 ನೇ ಕಾಳಿಂಗ ಸರ್ಪ ಇದಾಗಿದೆ.